ಅಭಿಪ್ರಾಯ / ಸಲಹೆಗಳು

ವಿಶ್ವ ಬ್ಯಾಂಕ್ ನೆರವಿನ ಕರ್ನಾಟಕ ಜಲಾನಯನ ಅಭಿವೃದ್ಧಿ ಯೋಜನೆ-II (ಸುಜಲ-III)

ಪರಿಚಯ

 

ಜಲಾನಯನ ಅಭಿವೃದ್ಧಿ ಇಲಾಖೆಯು ವಿಶ್ವಬ್ಯಾಂಕ್ ನೆರವಿನೊಂದಿಗೆ ಕರ್ನಾಟಕ ಜಲಾನಯನ ಅಭಿವೃದ್ಧಿ ಯೋಜನೆ-II (ಸುಜಲ-III) ೨೦೧೩-೧೪ನೇ ಸಾಲಿನಿಂದ ರೂ.೪೧೨.೫೯ ಕೋಟಿಗಳ (ಪರಿಷ್ಕೃತ) ಅನುದಾನದಲ್ಲಿ ಅನುಷ್ಠಾನಗೊಳಿಸುತ್ತಿದೆ. ಯೋಜನೆಯನ್ನು ರಾಜ್ಯದ ೧೧ ಜಿಲ್ಲೆಗಳಾದ ಚಾಮರಾಜನಗರ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ, ಗದಗ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳ ಆಂಯ್ದ ೨೫೩೧ ಕಿರುಜಲಾನಯನಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟು ಯೋಜನಾ ಮೊತ್ತದಲ್ಲಿ ೭೦% ವಿಶ್ವ ಬ್ಯಾಂಕ್ ಪಾಲು ಮತ್ತು ೩೦% ರಾಜ್ಯ ಸರ್ಕಾರದ ಪಾಲು ಇರುತ್ತದೆ ಮತ್ತು ಇದರಲ್ಲಿ ರೂ.೯೫.೦೦ ಕೋಟಿ ಮೊತ್ತವನ್ನು ತೋಟಗಾರಿಕೆ ಇಲಾಖೆಗೆ ತೋಟಗಾರಿಕೆ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ನಿಗದಿಪಡಿಸಲಾಗಿರುತ್ತದೆ. ಯೋಜನಾ ಅವಧಿಯು ಡಿಸೆಂಬರ್ ೨೦೧೯ ಅಂತ್ಯದವರೆಗೆ ಇರುತ್ತದೆ.

 

ಯೋಜನೆಯ ಧ್ಯೇಯೊದ್ದೇಶ:

 

ಮಳೆಯಾಶ್ರಿತ ಕೃಷಿ ಕಾರ್ಯಕ್ರಮಗಳು, ನವೀನ ಹಾಗೂ ವೈಜ್ಞಾನಿಕ ಆಧಾರಿತ ವಿಧಾನಗಳು ಮತ್ತು ವಿವಿಧ ಹಂತಗಳಲ್ಲಿ ಸಾಂಸ್ಥಿಕ ಬಲವರ್ಧನೆ ಹಾಗೂ ಪಾಲುದಾರರ ಸಾಮರ್ಥ್ಯ ಅಭಿವೃದ್ಧಿ ಸಂಬಂಧಿತ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ಹೆಚ್ಚು ಪರಿಣಾಮಕಾರಿಯಾಗಿ ಜಲಾನಯನ ನಿರ್ವಹಣೆಯನ್ನು ನಿರೂಪಿಸುವುದು.

 

ಯೋಜನೆಯ ಘಟಕಗಳು :

ಯೋಜನೆಯು ಪ್ರಮುಖವಾಗಿ ಕೆಳಕಂಡ 5 ಘಟಕಗಳನ್ನು ಹೊಂದಿರುತ್ತದೆ.

ಘಟಕ-1:

ಮಳೆಯಾಶ್ರಿತ ಪ್ರದೇಶಗಳಲ್ಲಿ ಯೋಜನೆಗಳ ಸಮಗ್ರ ಒಗ್ಗೂಡುವಿಕೆಗೆ ನೆರವು ನೀಡುವುದು: ವೈಜ್ಞಾನಿಕ ಆಧಾರಿತ ಕ್ರಮಗಳನ್ನು ಅನುಸರಿಸಿ ಸುಧಾರಿತ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ಅನುಷ್ಠಾನಗೊಳಿಸುವುದು.

ಘಟಕ-2:

ಸಂಶೋಧನೆ, ಅಭಿವೃದ್ಧಿ ಮತ್ತು ನವೀನತೆ: ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವು ನೀಡಿ ಸಮಗ್ರ ಜಲಾನಯನ ನಿರ್ವಹಣೆಗೆ ಅಗತ್ಯವಾದ ಪ್ರಾಯೋಗಿಕ ಜ್ಞಾನವನ್ನು ಅಭಿವೃದ್ಧಿಪಡಿಸುವುದು

ಘಟಕ-3:

ಸಾಂಸ್ಥಿಕ ಬಲವರ್ಧನೆ: ಸಮಗ್ರ ಜಲಾನಯನ ನಿರ್ವಹಣೆಯಲ್ಲಿ ಪಾತ್ರ ವಹಿಸುವ ಸಂಸ್ಥೆಗಳ ಸಾಂಸ್ಥಿಕ ಬಲವರ್ಧನೆ ಮತ್ತು ವಿವಿಧ ಹಂತಗಳ ಪಾಲುದಾರರ ಸಾಮರ್ಥ್ಯ ಬಲವರ್ಧನೆ ಮಾಡುವ ಮೂಲಕ ಪರಿಣಾಮಕಾರಿಯಾಗಿ ಸಮಗ್ರ ಜಲಾನಯನ ನಿರ್ವಹಣೆ ಮಾಡಲು ನೆರವು ನೀಡುವುದು

ಘಟಕ-4:

ತೋಟಗಾರಿಕೆ ಅಭಿವೃದ್ಧಿ: ಮಳೆಯಾಶ್ರಿತ ಪ್ರದೇಶದಲ್ಲಿ ತೋಟಗಾರಿಕಾ ಕೃಷಿಯನ್ನು ಬಲಪಡಿಸುವ ಬಗ್ಗೆ ಜ್ಞಾನ ವೃದ್ಧಿಸುವುದು, ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಸುಧಾರಣೆ, ಮೌಲ್ಯವರ್ಧನೆ ಮುಂತಾದ ವಿಷಯಗಳ ಬಗ್ಗೆ ಸಂಸ್ಥೆಗಳ ಮತ್ತು ಸಮುದಾಯಗಳ ಸಾಮರ್ಥ್ಯ ಬಲವರ್ದನೆ ಮಾಡುವುದು.

ಘಟಕ-5:

ಯೋಜನೆಯ ನಿರ್ವಹಣೆ ಮತ್ತು ಸಮನ್ವಯ: ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಿರುವ ಸೌಕರ್ಯ ಮತ್ತು ನಿರ್ವಹಣಾ ವಿಧಾನಗಳನ್ನು ಒದಗಿಸುವುದು ಮತ್ತು ಯೋಜನೆ ಅನುಷ್ಠಾನಕ್ಕಾಗಿ ಜಲಾನಯನ ಅಭಿವೃದ್ಧಿ ಇಲಾಖೆಗೆ ಅಗತ್ಯ ಬೆಂಬಲ ನೀಡುವುದು.

 

 

ಯೋಜನೆಯ ಪಾಲುದಾರ ಸಂಸ್ಥೆಗಳು

ಸುಜಲ-III ಯೋಜನೆಯ ವಿವಿಧ ಘಟಕಗಳಡಿಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪಾಲುದಾರ ಸಂಸ್ಥೆಗಳ ಅಗತ್ಯವಿದ್ದು, ಇದಕ್ಕಾಗಿ ಕೆಳಕಂಡ ಸಂಸ್ಧೆಗಳನ್ನು ಗುರುತಿಸಿ ಕರಾರು ಒಪ್ಪಂದಗಳನ್ನುಮಾಡಿಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.

 • ರಾಷ್ರೀಯ ಮಣ್ಣು ಸಮೀಕ್ಷೆ ಮತ್ತು ಭೂ ಬಳಕೆ ಯೋಜನೆ ಸಂಸ್ಧೆ (ಎನ್.ಬಿ.ಎಸ್.ಎಸ್.&ಎಲ್.ಯು.ಪಿ.), ಬೆಂಗಳೂರು
 • ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರು
 • ಕೃಷಿ ವಿಶ್ವ ವಿದ್ಯಾನಿಲಯ, ಧಾರವಾಡ
 • ಕೃಷಿ ವಿಶ್ವ ವಿದ್ಯಾನಿಲಯ, ರಾಯಚೂರು
 • ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯ, ಶಿವಮೊಗ್ಗ
 • ತೋಟಗಾರಿಕೆ ವಿಶ್ವ ವಿದ್ಯಾನಿಲಯ, ಬಾಗಲಕೋಟೆ
 • ಭಾರತೀಯ ವಿಜ್ಞಾನ ಸಂಸ್ಧೆ (ಐ.ಐ.ಎಸ್‍ಸಿ.) ಬೆಂಗಳೂರು
 • ಕರ್ನಾಟಕ ಪಶು ಸಂಗೋಪನೆ ಮತ್ತು ಮೀನುಗಾರಿಕೆ ವಿಶ್ವ ವಿದ್ಯಾನಿಲಯ, ಬೀದರ್
 • ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಸಂಸ್ಥೆ (ಕೆ.ಎಸ್.ಎನ್.ಡಿ.ಎಂ.ಸಿ.) ಬೆಂಗಳೂರು
 • ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ (ಕೆ.ಎಸ್.ಆರ್.ಎಸ್.ಎ.ಸಿ.), ಬೆಂಗಳೂರು
 • ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆ, ಬಳ್ಳಾರಿ
 • ಅಂತರ್ರಾಷ್ಟ್ರೀಯ ಅರೆ ಶುಷ್ಕ ವಲಯದ ಬೆಳೆ ಸಂಶೋಧನಾ ಸಂಸ್ಥೆ, (ICRISAT), ಹೈದರಾಬಾದ್
 • National Centre for Excellence of RSETIs (NACER), ಬೆಂಗಳೂರು
 • The Energy and Resource Institute (TERI), ಬೆಂಗಳೂರು
 • Agricultural Technology Application Research Institute (ATARI), ಬೆಂಗಳೂರು

 

ಯೋಜನಾ ಕ್ಷೇತ್ರಗಳಲ್ಲಿ ಭೂ ಮತ್ತು ಜಲ ಸಂಪನ್ಮೂಲ, ಸಾಮಾಜಿಕ-ಆರ್ಥಿಕ, ಮಳೆಯ ಪ್ರಮಾಣ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ದತ್ತಾಂಶ/ಮಾಹಿತಿಯನ್ನು ವಿವಿಧ ವೈಜ್ಞಾನಿಕ ವಿಧಾನಗಳ ಮೂಲಕ ಪಾಲುದಾರ ಸಂಸ್ಥೆಗಳ ಮೂಲಕ ಸಂಗ್ರಹಿಸಿ ಸಹಭಾಗಿತ್ವದಲ್ಲಿ ಕಿರು ಜಲಾನಯನಗಳ ಅಭಿವೃದ್ಧಿ ಯೋಜನೆಗಳನ್ನು ಹೆಚ್ಚು ನಿಖರವಾಗಿ ತಯಾರಿಸಲು ಮತ್ತು ಈ ಮೂಲಕ ಪರಿಣಾಮಕಾರಿಯಾಗಿ ಜಲಾನಯನ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು, ಯೋಜನೆಯಡಿ ಸಂಗ್ರಹಿಸಿದ ದತ್ತಾಂಶ / ಮಾಹಿತಿ ಬಳಸಿಕೊಂಡು ಡಿಜಿಟಲ್ ಗ್ರಂಥಾಲಯ, ನಿರ್ಣಯ ಬೆಂಬಲ ವ್ಯವಸ್ಥೆ (ಡಿಸಿಶನ್ ಸಪೋರ್ಟ ಸಿಸ್ಟಂ) ಮತ್ತು ಭೂ ಸಂಪನ್ಮೂಲ ಪೋರ್ಟಲ್‍ಗಳನ್ನು ಸ್ಥಾಪಿಸಿ ಕೃಷಿ ಹಾಗೂ ರೈತರ ಅಭಿವೃದ್ಧಿಗೆ ಉಪಯೋಗಿಸಲು ಹಾಗೂ ವಿವಿಧ ಭೂ ಸಂಬಂಧಿತ ಇಲಾಖೆಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ನವೀನ ತಾಂತ್ರಿಕತೆಗಳನ್ನು ಬಳಸಿ ಯೋಜನೆಗಳನ್ನು ಯೋಜಿಸಲು ಮತ್ತು ಅನುಷ್ಠಾನಗೊಳಿಸಲು ಅಗತ್ಯ ಮಾಹಿತಿ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸುವುದು ಹಾಗೂ ಯೋಜನೆಗಳೊಂದಿಗೆ ಉತ್ತಮ ಸಮ್ಮಿಳನವನ್ನು(ಇಂಟಿಗ್ರೇಷನ್) ತರುವ ಉದ್ದೇಶವನ್ನು ಯೋಜನಾ ಚಟುವಟಿಕೆಗಳು ಹೊಂದಿರುತ್ತದೆ. ಡಿಜಿಟಲ್ ಗ್ರಂಥಾಲಯ, ನಿರ್ಣಯ ಬೆಂಬಲ ವ್ಯವಸ್ಥೆ (ಡಿಸಿಶನ್ ಸಪೋರ್ಟ ಸಿಸ್ಟಂ) ಮತ್ತು ಭೂ ಸಂಪನ್ಮೂಲ ಪೋರ್ಟಲ್ ಸ್ಥಾಪನೆಗೆ ಸಂಸ್ಥೆ ಆಯ್ಕೆಮಾಡಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ.

ಎನ್.ಬಿ.ಎಸ್.ಎಸ್.&ಎಲ್.ಯು.ಪಿ. ಸಂಸ್ಥೆಯು ಭೂಸಂಪನ್ಮೂಲ ಸಮೀಕ್ಷೆ (ಎಲ್.ಆರ್.ಐ) ಕಾರ್ಯದ ಮುಂದಾಳು ಪಾಲುದಾರ ಸಂಸ್ಥೆಯಾಗಿದ್ದು, ರಾಜ್ಯದ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಯಲಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತದೆ. ಎಲ್.ಆರ್.ಐ ಕಾರ್ಯದಲ್ಲಿ ಮುಖ್ಯವಾಗಿ ಮಣ್ಣಿನ ಪದರಗಳ ಅಧ್ಯಯನ (ಸಾಯಿಲ್ ಪ್ರೊಫೈಲ್) ಮಣ್ಣಿನ ಮಾದರಿಗಳ ವಿಶ್ಲೇಷಣೆ ಮತ್ತು ಭೂ ಫಲವತ್ತತೆಯ ಅಧ್ಯಯನ ಮಾಡಿ ಕಿರುಜಲಾನಯನಗಳ ನಕ್ಷೆ ತಯಾರಿಸಲಾಗುತ್ತದೆ. ಭಾರತೀಯ ವಿಜ್ಞಾನ ಸಂಸ್ಧೆ (ಐ.ಐ.ಎಸ್‍ಸಿ.) ಬೆಂಗಳೂರು ಮುಂದಾಳತ್ವದಲ್ಲಿ ರಾಜ್ಯದ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಯಲಗಳ ಮೂಲಕ ಹೈಡ್ರೋಲಾಜಿಕಲ್ ಅಧ್ಯಯನವನ್ನು ಆಯ್ದ 14 ಮಾದರಿ ಕಿರುಜಲಾನಯನಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಲಭ್ಯವಿರುವ ಬಾವಿಗಳ ನೀರಿನ ಮಟ್ಟ, ಅಂತರ್ಜಲ ಏರಿಳಿತ ಅಧ್ಯಯನ, ಮಣ್ಣಿನ ತೇವಾಂಶ, ನೀರಿನ ಮಾದರಿಗಳ ವಿಶ್ಲೇಷಣೆಯನ್ನು ನಿಗದಿತ ಅಂತರಗಳಲ್ಲಿ ಕೈಗೊಂಡು ಮಾಹಿತಿ ದಾಖಲಿಸಲಾಗುತ್ತದೆ. ಮೂಲ ಮಾಹಿತಿ ಸಮೀಕ್ಷೆ ಕೈಗೊಂಡು ಯೋಜನಾ ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರವು ಉಪಗ್ರಹ ಆಧಾರಿತ ಇಮೆಜರಿಗಳನ್ನು ಪಾಲುದಾರ ಸಂಸ್ಥೆಗಳಿಗೆ ಒದಗಿಸುತ್ತದೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಸಂಸ್ಥೆಯು ಯೋಜನಾ ಪ್ರದೇಶದ ವಾತಾವರಣ ಮತ್ತು ಹವಾಮಾನ ಮಾಹಿತಿಯನ್ನು ಒದಗಿಸುತ್ತದೆ. ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯು ಯೋಜನೆಯ ತಾಂತ್ರಿಕ ಉಸ್ತುವಾರಿ ಮತ್ತು ಮೌಲ್ಯ ಮಾಪನ ಕಾರ್ಯವನ್ನು ಮತ್ತು TERI ಸಂಸ್ಥೆಯು ಕ್ಷೇತ್ರಮಟ್ಟದಲ್ಲಿ ಬಾಹ್ಯ ಉಸ್ತುವಾರಿ ಮತ್ತು ಮೌಲ್ಯ ಮಾಪನ ಕಾರ್ಯವನ್ನು ನಿರ್ವಹಿಸುತ್ತದೆ.ATARI ಸಂಸ್ಥೆಯು ಗ್ರಾಮಮಟ್ಟದಲ್ಲಿ ಯೋಜನೆಯ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಮತ್ತು NACER ಸಂಸ್ಥೆಯು ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಆದಾಯೋತ್ಪನ್ನ ಚಟುವಟಿಕೆಗಳ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

ಯೋಜನೆಯಡಿ ಅಭಿವೃದ್ಧಿಪಡಿಸಿದ ಮಾಹಿತಿ ಮತ್ತು ತಾಂತ್ರಿಕತೆ ಬಳಸಿ ಸಂಪೂರ್ಣ ಜಲಾನಯನ ಉಪಚಾರ ಕಾರ್ಯಕ್ರಮವನ್ನು (Saturation of watersheds) 11 ಯೋಜನಾ ಜಿಲ್ಲೆಗಳಲ್ಲಿ ಆಯ್ಕೆ ಮಾಡಿದ ಜಲಾನಯನದಲ್ಲಿ ಅನುಷ್ಠಾನ ಮಾಡಲಾಗುತ್ತದೆ. ಇದರೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ, ಸಾಂಸ್ಥಿಕ ಬಲವರ್ಧನೆ ಮತ್ತು ಯೋಜನೆ ಪಾಲುದಾರರ ಮತ್ತು ಫಲಾನುಭವಿಗಳ ಸಾಮರ್ಥ್ಯ ಬಲವರ್ಧನೆ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದಕತೆ ಹೆಚ್ಚಿಸುವುದು, ಪಶು ಮತ್ತು ಮೀನುಗಾರಿಕೆ ಅಭಿವೃದ್ಧಿ ಇತ್ಯಾದಿ ಚಟುವಟಿಕೆಗಳನ್ನು ಯೋಜನೆಯಡಿ ಕೈಗೊಳ್ಳಲಾಗುತ್ತಿದೆ.

 

ಇತ್ತೀಚಿನ ನವೀಕರಣ​ : 26-09-2023 04:31 PM ಅನುಮೋದಕರು: Vijaya H K


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080