ಅಭಿಪ್ರಾಯ / ಸಲಹೆಗಳು

ಮಣ್ಣು ಮತ್ತು ನೀರು ಸಂರಕ್ಷಣೆ

 

 

     ಮಣ್ಣು ಮತ್ತು ನೀರಿನ ಮಹತ್ವವನ್ನು ಅರಿತು ಇವುಗಳ ಸಂರಕ್ಷಣೆ ಮಾಡಲು ವಿವಿಧ ಯೋಜನೆಗಳನ್ನು ಅದರಲ್ಲಿ ಬಹುಮುಖ್ಯವಾಗಿ ಜಲಾನಯನ ಅಭಿವೃದ್ಧಿ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಹೆಚ್ಚಿನ ಭೂ ಪ್ರದೇಶ ಮಳೆಯಾಶ್ರಿತ ಪ್ರದೇಶವಾಗಿದ್ದು, ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದರಿಂದ ಸುಸ್ಥಿರ ಕೃಷಿಗೆ ಬುನಾದಿಯಾಗುತ್ತದೆ.

 

ಜಲಾನಯನ ಅಭಿವೃದ್ಧಿಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಪ್ರಮುಖವಾದ ಚಟುವಟಿಕೆಗಳು

 

     ಉತ್ತಮ ಮಣ್ಣು ಮತ್ತು ನೀರಿನ ಸಂಪನ್ಮೂಲಗಳು ಒಂದು ದೇಶದ ಏಳಿಗೆಗೆ ಬಹಳ ಮುಖ್ಯವಾದುವು. ಏಕೆಂದರೆ, ಯಾವುದೇ ಬೆಳೆ / ವೃಕ್ಷ ಬೆಳೆಯಬೇಕಾದರೆ ಈ ಎರಡು ಸಂಪನ್ಮೂಲಗಳು ಬೇಕಾಗುತ್ತವೆ. ಮನುಷ್ಯ ಹಾಗೂ ಪ್ರಾಣಿ ಪಕ್ಷಿಗಳ ಜೀವನ ಈ ಸಂಪನ್ಮೂಲಗಳ ಲಭ್ಯತೆ ಮೇಲೆ ಆಧಾರ ಪಟ್ಟಿರುತ್ತದೆ. ಒಂದು ಅಂದಾಜಿನ ಪ್ರಕಾರ ಸ್ವಾಭಾವಿಕವಾಗಿ ಒಂದು ಇಂಚು ದಪ್ಪದ ಮಣ್ಣು ತಯಾರಾಗಲು ಸುಮಾರು ಸಾವಿರ ವರ್ಷಗಳು ಬೇಕಾಗುತ್ತದೆ. ಅಂದರೆ ಈಗಾಗಲೇ ಲಭ್ಯವಿರುವ ಮಣ್ಣು ಯಾವುದೇ ಕಾರಣದಿಂದ ಕೊಚ್ಚಿ ಹೋದರೆ ಅದರ ನಷ್ಟ ಮತ್ತು ಅದರಿಂದಾಗುವ ಅನಾಹುತದ ಅರಿವನ್ನು ನಾವು ತಿಳಿಯಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ / ಜಾನುವಾರುಗಳ ಒತ್ತಡದಿಂದ ನಿಸರ್ಗದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಸ್ವಾಭಾವಿಕವಾಗಿ ಬೆಳೆದಂತ ಕಾಡು ಮತ್ತು ಗುಡ್ಡಗಳಲ್ಲಿ ವ್ಯವಸಾಯ ಪ್ರಾರಂಭ ಮಾಡಿರುವುದರಿಂದ ಹೆಚ್ಚಿನ ಭೂ ಸವಕಳಿಯನ್ನು ಕಾಣಬಹುದಾಗಿದೆ. ಅಲ್ಲದೇ, ಮನುಷ್ಯನ ಉದಾಸೀನತೆ ಹಾಗೂ ಉತ್ತಮ ನಿರ್ವಹಣೆ ಇಲ್ಲದೇ ಇರುವುದರಿಂದ ಈ ಎರಡು ಸಂಪನ್ಮೂಲಗಳ ನಷ್ಟ ಹೆಚ್ಚಿನ ಮಟ್ಟಿಗೆ ಆಗಿದೆ.

 

     ಭೂ ಸವಕಳಿಯನ್ನು ತಡೆಯಲು ಮತ್ತು ಮಳೆ ನೀರನ್ನು ಸುರಿದಲ್ಲಿಯೇ ಇಂಗುವಂತೆ ಮಾಡಲು ಹಲವು ಮಣ್ಣು ಹಾಗೂ ನೀರು ಸಂರಕ್ಷಣಾ ಚಟುವಟಿಕೆಗಳನ್ನು ಆಯಾ ಸ್ಥಳಕ್ಕೆ ಸೂಕ್ತವಾಗುವಂತೆ ಕೈಗೊಳ್ಳುವುದು. ಜಲಾನಯನ ಅಭಿವೃದ್ಧಿಯಲ್ಲಿ ಈ ಘಟಕಕ್ಕೆ ಪ್ರಥಮ ಆಧ್ಯತೆಯನ್ನು ನೀಡಲಾಗಿದೆ. ಮಣ್ಣು ಮತ್ತು ನೀರು ಸಂರಕ್ಷಣಾ ಚಟುವಟಿಕೆಗಳನ್ನು ಕೆಳಗಿನಂತೆ ವಿಂಗಡಿಸಬಹುದು.

 

  1. ಮಣ್ಣು ಸಂರಕ್ಷಣಾ ಉಪಚಾರಗಳು: ಸಮಪಾತಳಿ ಬದುಗಳು, ಅಲ್ಪ ಇಳಿಜಾರಿನ ಬದುಗಳು, ಟ್ರೆಂಚ್ ಕಂ ಬಂಡ್, ಸಮಪಾತಳಿ ಕಾಲುವೆ, ಸಸ್ಯ ತಡೆಗಳು, ಇತ್ಯಾದಿ.
  2. ಸುರಿದ ಮಳೆ ನೀರನ್ನು ಸ್ಥಳದಲ್ಲಿಯೇ ಇಂಗಿಸುವ ಕ್ರಮಗಳು: ಮಾಗಿ ಉಳುಮೆ, ಸಮಪಾತಳಿ ಬೇಸಾಯ, ಸಮಪಾತಳಿ ಗುಂಟ ಅಥವಾ ಇಳುಕಲಿಗೆ ಅಡ್ಡವಾಗಿ ಸಣ್ಣ ಬದುಗಳು, ದೋಣಿ ಸಾಲುಗಳು, ಬದುಗಳ ಮದ್ಯೆ ಸಸ್ಯ ಬದುಗಳು, ಚೌಕ ಮಡಿಗಳು ಇತ್ಯಾದಿ.
  3. ಹೆಚ್ಚುವರಿ ನೀರನ್ನು ಸುರಕ್ಷಿತವಾಗಿ ಹೊರ ಹಾಕುವ ಕ್ರಮಗಳು: ತಿರುವುಗಾಲುವೆಗಳು, ಹುಲ್ಲು ಹಚ್ಚಿದ ನೀರು ಗಾಲುವೆಗಳು, ಇತ್ಯಾದಿ.
  4. ಕೊರಕಲು ನಿರ್ವಹಣಾ ಕ್ರಮಗಳು: ಕೊರಕಲು ತಡೆಗಳು, ಕೊಳ್ಳ ನಿರ್ವಹಣಾ ರಚನೆಗಳು ಇತ್ಯಾದಿ.
  5. ಹರಿಯುವ ನೀರಿನ ಸಂಗ್ರಹಣಾ ಕ್ರಮಗಳು: ಕೃಷಿ ಹೊಂಡ, ಚೆಕ್ ಡ್ಯಾಂ, ನಾಲಾಬದು, ವೆಂಟೆಡ್ ಡ್ಯಾಂ ಇತ್ಯಾದಿ.

 

ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳ ವಿಂಗಡಣೆ

  

ಸಾಗುವಳಿ ಜಮೀನಿನ ಉಪಚಾರ ಕ್ರಮಗಳು

ಸಾಗುವಳಿಗೆ ಯೋಗ್ಯವಲ್ಲದ ಜಮೀನಿನ ಉಪಚಾರಗಳು

ಜಲವಾಹಿನಿಯ ಉಪಚಾರಗಳು

 

1.  ಸಮಪಾತಳಿ ಬದುಗಳು

2.  ಕೋಡಿಗಳು

3.  ಗುಂಡುಗಲ್ಲಿನ ಬದು

4.  ಕಂದಕದೊಂದಿಗೆ ಬದು

5.  ಬೋಲ್ಡರ್ ಬದು

6.  ಕೃಷಿ ಹೊಂಡ

7.  ನೀರು ದಾರಿಗಳು

8.  ಝಿಂಗ್ ಟೆರೆಸಿಂಗ್

9.  ವಿಫಲ ಬಾವಿಯ ಜಲ ಮರುಪೂರಣ

10. ಸಸ್ಯ ಬದು

11. ಭೂಮಿ ಮಟ್ಟ ಮಾಡುವುದು

12. ವಾರಡಿ ಬದು

13. ಅಲ್ಪ ಆಳದ ಬಾವಿ

14. ಸಮಸ್ಯಾತ್ಮಕ ಭೂಮಿ ಅಭಿವೃದ್ಧಿ

15. ಬೆಂಚ್ ಟೆರೆಸಿಂಗ್ (ಜಗತಿ ಕಟ್ಟೆ)

16. ಸಂರಕ್ಷಣಾ ಕಾಲುವೆ

17. ಸಮಪಾತಳಿ ಬದುಪಟ್ಟಿ

18. ಡೋವ

 

1. ತಿರುವುಗಾಲುವೆ

2. ಕಲ್ಯಾಣಿ

3. ಸಮಪಾತಳಿ ಅವಿಚ್ಛಿನ್ನ   ಕಂದಕ

4. ಸಮಪಾತಳಿ ಪರ್ಯಾಯ ಕಂದಕ

5. ವಾರಡಿ ಕಂದಕ

6. ವಿವಿಧ ಆಕಾರದ ತಟ್ಟೆಗಳು

7. ಸಸ್ಯ ಶೋಧಕ ಪಟ್ಟಿ

 

 I. ಮೇಲುಸ್ತರದ ಉಪಚಾರಗಳು

 

 1. ಹುಲ್ಲು ಪಟ್ಟಿ ತಡೆ

 2. ಹುಲ್ಲು ಹಚ್ಚಿದ ಮಣ್ಣು ಒಡ್ಡಿನ ತಡೆ

 3. ಕಂಟಿ ತಡೆ

 4. ಗುಂಡುಗಲ್ಲಿನ ತಡೆ

 5. ರಬಲ್ ಕಲ್ಲಿನ ತಡೆ

 6. ನೀರು ಜಾರು ಬಂಡೆ

 7. ಸಂಕನ್ ಪಾಂಡ್

 8. ಗೇಬಿಯಾನ ತಡೆ

 9. ಮಿನಿಪರ್ಕೋಲೇಶನ್ ಟ್ಯಾಂಕ್

10. ನೀರು ಇಂಗು ಗುಂಡಿ

 

  II. ಮಧ್ಯಮ ಸ್ಥರದ ಉಪಚಾರಗಳು

 

1. ಡಗ್ ಔಟ್ ಪಾಂಡ

2. ಒಣ ಕಲ್ಲಿನ ಕೊಳ್ಳ ಸುಧಾರಣಾ ರಚನೆ

3. ಕೊಳ್ಳ ಸುಧಾರಣಾ ರಚನೆ

4. ಮರಳು ತುಂಬಿದ ಚೀಲಗಳ ತಡೆ

5. ಗೋಕಟ್ಟೆ

 

  III. ಕೆಳ ಸ್ಥರದ ಉಪಚಾರಗಳು

 

1. ನಾಲಾ ಬದು

2. ತಡೆ ಅಣೆ

3. ಪರ್ಕೋಲೇಶನ್ ಟ್ಯಾಂಕ್

4. ಕಿಂಡಿ ತಡೆ ಅಣೆ

5. ಭೂಗತ ಬಾಂದಾರ

6. ನಾಲಾ ರಿವೆಟಮೆಂಟ್

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಭೂ ನಿರ್ವಹಣೆಯ ಅಭ್ಯಾಸಗಳು

 

I. ಸಾಗುವಳಿ ಜಮೀನಿನ ಉಪಚಾರ ಕ್ರಮಗಳ

 

     ಸಾಗುವಳಿ ಜಮೀನು ಅಥವಾ ಕೃಷಿ ಯೋಗ್ಯ ಜಮೀನುಗಳಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಯಾಂತ್ರಿಕ ಮತ್ತು ಜೈವಿಕ ಪದ್ಧತಿಗಳನ್ನು ಅಳವಡಿಸಲಾಗುತ್ತಿದೆ. ಯಾಂತ್ರಿಕ ಪದ್ಧತಿಯಲ್ಲಿ ವಿವಿಧ ರೀತಿಯ ಬದುಗಳ ಮತ್ತು ಕಂದಕಗಳ ನಿರ್ಮಾಣಕ್ಕೆ ಒತ್ತು ಕೊಡಲಾಗುತ್ತದೆ. ಅದೇ ಜೈವಿಕ ಪದ್ಧತಿಯಲ್ಲಿ ಸಸ್ಯ ತಡೆಗಳಿಗೆ ಆದ್ಯತೆ ನೀಡಲಾಗುತ್ತಿದೆ.

 

 ಸಮಪಾತಳಿ ಬದು :

 

       ಸಮಪಾತಳಿ ಬದುಗಳನ್ನು ಕಾಂಟೂರ್ ಬಂಡ್ ಅಂತಲೂ ಕರೆಯಲಾಗುತ್ತದೆ. ಹೆಸರು ಸೂಚಿಸುವಂತೆ ಬದುಗಳನ್ನು ಸಮಪಾತಳಿ ರೇಖೆಯಲ್ಲಿ ನಿರ್ಮಿಸಲಾಗುತ್ತದೆ. ಅಂದರೆ, ಭೂಮಿಯ ಇಳಿಜಾರಿಗೆ ಅಡ್ಡಲಾಗಿ ನಿರ್ಮಿಸುವ ಚತುರ್ಭುಜಾಕಾರದ ಬದುಗಳಾಗಿರುತ್ತವೆ. ಇಂತಹ ಬದುಗಳ ನಿರ್ಮಾಣದಿಂದ ಮಳೆಯ ನೀರು ಹರಿಯುವಿಕೆಯನ್ನು ತಡೆದು ಜಮೀನಿನಲ್ಲಿ ಹಿಡಿದ್ದಿಟ್ಟುಕೊಂಡು ಭೂಮಿಯಲ್ಲಿ ಇಂಗಲು ಅನುಕೂಲ ಮಾಡುತ್ತದೆ. ಸಮಪಾತಳಿ ಬದುಗಳ ನಿರ್ಮಾಣ ಮಾಡಬೇಕಾದರೆ (ಅ) ಜಮೀನಿನ ಇಳಿಜಾರಿನ ಮಟ್ಟ ಶೇ.6ರಷ್ಟು ಅಥವಾ ಅದಕ್ಕಿಂತಲೂ ಕಡಿಮೆ ಇರಬೇಕು. ಕೆಲವು ಸಂದರ್ಭಗಳಲ್ಲಿ ಸ್ವಲ್ಪ ಹೆಚ್ಚು ಇಳಿಜಾರು ಇದ್ದಾಗಲೂ ಬದುಗಳನ್ನು ನಿರ್ಮಾಣಗೊಳಿಸಲಾಗುತ್ತಿದೆ, (ಆ) ವಾರ್ಷಿಕ ಮಳೆ ಪ್ರಮಾಣ 750ಮಿ.ಮಿ. ಗಿಂತಲೂ ಕಡಿಮೆ ಇರಬೇಕು, (ಇ) ನೀರು ಬೇಗ ಇಂಗುವ ಕೆಂಪು, ಜಂಬು ಮಣ್ಣಿನ ಪ್ರದೇಶವಾಗಿರಬೇಕು. ಆಳವಾದ ಕಪ್ಪು ಭೂಮಿಯಲ್ಲಿ ನೀರು ಬೇಗ ಇಂಗದೇ ಇರುವುದರಿಂದ ಬದುಗಳ ನಿರ್ವಹಣೆ ಕಷ್ಟವಾಗುತ್ತದೆ. ಸಮಪಾತಳಿ ಬದುಗಳ ನಿರ್ಮಾಣದಿಂದ ಬೆಳೆಗಳ ಇಳುವರಿಯಲ್ಲಿ ಶೇ. 15-20ರ ವರೆಗೂ ಹೆಚ್ಚಿಗೆ ಕಂಡುಬರುತ್ತದೆ. ಆದಾಗ್ಯೂ ಸಣ್ಣ ಸಣ್ಣ ಹಿಡುವಳಿ ಇರುವುದರಿಂದ ಸಮಪಾತಳಿ ಬದುಗಳ ನಿರ್ಮಾಣ ಅಂತಹ ಜಮೀನುಗಳಿಗೆ ಕಷ್ಟ ಸಾಧ್ಯವಾಗಿದೆ. ಇಂತಹ ಸನ್ನಿವೇಶಗಳಲ್ಲಿ ರೈತರು ತಮ್ಮ ಹೊಲದ ಬದುವನ್ನು ಸ್ಥಿರಪಡಿಸಿಕೊಂಡು ಮಣ್ಣಿನ ಸವಕಳಿಯನ್ನು ಕಡಿಮೆ ಮಾಡಿಕೊಳ್ಳಬಹುದು.

 

     ಸಮಪಾತಳಿ ಬದುಗಳನ್ನು ನಿರ್ಮಾಣ ಮಾಡುವಾಗ ಎರಡು ಬದುಗಳ ಅಂತರ ಭೂಮಿಯ ಇಳಿಜಾರಿನ ಪ್ರಮಾಣ, ಮಣ್ಣಿನ ವಿಧ, ಮಳೆ ಬೀಳುವ ಪ್ರಮಾಣ, ಭೂಮಿಯ ಬಳಕೆ ಅಥವಾ ಬೆಳೆಯುತ್ತಿರುವ ಬೆಳೆಯ ಪದ್ಧತಿ ಹಾಗೂ ಈಗಾಗಲೇ ಅಳವಡಿಸಿರುವ ಸಂರಕ್ಷಣಾ ಪದ್ಧತಿಗಳ ಆಧಾರದ ಮೇಲೆ ಇರುತ್ತದೆ.

 

ಕೋಡಿಗಳು/ ವೇಸ್ಟ್‍ವೇರ್ಸ್:

 

     ಬದುಗಳ ಹಿಂಬದಿಯಲ್ಲಿ ನಿಂತ ಹೆಚ್ಚಾದ ಮಳೆ ನೀರನ್ನು ಹೊರ ಹಾಕುವ ಸಾಧನ/ವ್ಯವಸ್ಥೆಯ ಕಾಮಗಾರಿಯೇ ಕೋಡಿ/ ಬಚ್ಚಲು/ಹೊರಗಂಡಿ (Waste weirs) ಎನ್ನುವರು.

 

     ಬದುಗಳನ್ನು ನಿರ್ಮಾಣ ಮಾಡಿದ ನಂತರ 24 ಗಂಟೆಗೂ ಹೆಚ್ಚು ಸಮಯ ನೀರು ಜಮೀನಿನಲ್ಲಿ ನಿಂತಿದ್ದರೆ ಹಲವು ಮಳೆಯಾಶ್ರಿತ ಬೆಳೆಗಳು ತಡೆದುಕೊಳ್ಳದೆ ಹಾಳಾಗುತ್ತವೆ. ಅದಕ್ಕೊಸ್ಕರವಾಗಿ 24ಗಂಟೆಗೂ ಹೆಚ್ಚು ಕಾಲ ಭೂಮಿಯಲ್ಲಿ ಇಂಗದೆ ಇರುವ ನೀರಿನ ಪ್ರಮಾಣವನ್ನು ಭೂಮಿಯಿಂದ ಹೊರಗೆ ಹಾಕಲು ವೇಸ್ಟ್‍ವೇರ್ಸ್‍ಗಳನ್ನು ಬದುಗಳಲ್ಲಿ ನಿರ್ಮಿಸಲೇಬೇಕು.

 

     ವೇಸ್ಟ್‍ವೇರ್‍ಗಳನ್ನು ನಿರ್ಮಾಣ ಮಾಡುವ ಸ್ಥಳ: ವೇಸ್ಟ್‍ವೇರ್‍ಗಳನ್ನು ಸ್ವಾಭಾವಿಕವಾಗಿ ತಗ್ಗು ಇರುವ ಪ್ರದೇಶದಲ್ಲಿ ನಿರ್ಮಿಸಬೇಕು ಆದರೆ ಎಲ್ಲಾ ಒಡ್ಡುಗಳ ವೇಸ್ಟ್‍ವೇರ್‍ಗಳು ನೇರವಾಗಿ ಒಂದೇ ರೇಖೆಯಲ್ಲಿ ಬರದೇ ಅವಿಚ್ಛಿನ್ನ (Staggerred) ರೀತಿಯಲ್ಲಿ ಇರಬೇಕು. ಹೆಚ್ಚಿನ ನೀರನ್ನು ಸುರಕ್ಷಿತವಾಗಿ ಹೊರಗೆ ಹಾಕಲು ಕಲ್ಲಿನ ಪಿಚ್ಚಿಂಗ್ ಅಥವಾ ಹುಲ್ಲಿನ ಸಾಡಿಂಗ್ ಮಾಡಲಾಗುತ್ತದೆ. ಸಾಮಾನ್ಯವಾಗಿ ವೇಸ್ಟವೇರ್‍ನ್ನು ಭೂಮಿಯಿಂದ ಒಂದಡಿ ಎತ್ತರದಲ್ಲಿ ಮತ್ತು ಬದುವಿನ ಎತ್ತರಕ್ಕಿಂತ ಒಂದಡಿ ಕಡಿಮೆ ಎತ್ತರದಲ್ಲಿ ನಿರ್ಮಿಸಲಾಗುವುದು. ವೇಸ್ಟ್‍ವೇರ್‍ನ ಅಗಲ ಕ್ಯಾಚ್‍ಮೆಂಟ್ / ಸಂಗ್ರಹಣ ವಿಸ್ತೀರ್ಣದ ಮೇಲೆ ಆಧಾರ ಪಟ್ಟಿರುತ್ತದೆ. ವೇಸ್ಟ್‍ವೇರ್‍ಗಳನ್ನು ವಿವಿಧ ವಸ್ತುಗಳನ್ನು ಬಳಸಿ ನಿರ್ಮಾಣ ಮಾಡಲಾಗುತ್ತಿದೆ.

 

 ಕೋಡಿಗಳ ನಿರ್ಮಾಣ: 

 

ಸ್ಥಳೀಯವಾಗಿ ಸಿಗುವ ಸಾಮಾಗ್ರಿಗಳನ್ನು ಉಪಯೋಗಿಸಿ ಕೋಡಿ ನಿರ್ಮಿಸುವುದು.

ಬದುವಿನ ಮೇಲ್ಭಾಗದಲ್ಲಿ ಒಂದು ಅಡಿ ನೀರು ನಿಲ್ಲಿಸುವ ಉದ್ದೇಶ, ರೈತನ ಇಚ್ಛೆಗೆ ಅನುಗುಣವಾಗಿ ಹೆಚ್ಚು ಕಡಿಮೆ ಮಾಡಬಹುದು.

ಹೆಚ್ಚುವರಿ ಮಳೆಯ ನೀರನ್ನು ಹೊರಹಾಕಲು ನೆಲ ಗಟ್ಟಿ ಇದ್ದರೆ ಅಗೆದು ತೆಗೆದ ಕೋಡಿ ಇಲ್ಲದಿದ್ದರೆ, ಚಾನಲ್ ಕೋಡಿ. ಇವುಗಳನ್ನು ಪಾರ್ಶ್ವ ಬದುವಿನಲ್ಲಿ ನಿರ್ಮಿಸಬೇಕು.

ಕೆಂಪು ಮಣ್ಣು ಇರುವ, ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಹುಲ್ಲಿನಕೋಡಿ ಹಾಗೂ ಸ್ಥಳದಲ್ಲಿ ಹೆಚ್ಚು ಕಲ್ಲುಗಳು ದೊರೆಯುವುದಿದ್ದರೆ ಬೋಲ್ಡರ್ ಕೋಡಿ, ಬದುವಿನ ಕ್ಷೇತ್ರ ಹೆಚ್ಚಿದಾಗ ನೇರ ಧುಮುಕುವ ಕೋಡಿ, ಇವುಗಳನ್ನು ಮುಖ್ಯ ಬದುವಿನಲ್ಲಿ ನಿರ್ಮಿಸಬೇಕು. ಚಪ್ಪಡಿ ಹಾಗೂ ಪೈಪು ಕೋಡಿಗಳನ್ನೂ ಅಳವಡಿಸಬಹುದು. (ಮುಖ್ಯ ಬದುವಿನಲ್ಲಿ).

ಕೋಡಿಗಳನ್ನು ಅವಿಚ್ಛಿನ್ನ ಮಾದರಿ (staggered manner) ಯಲ್ಲಿ ಅಳವಡಿಸಬೇಕು.

 

ಗುಂಡುಕಲ್ಲಿನ ಬದು (BOULDER BUND) :

 

     ಗುಂಡುಕಲ್ಲುಗಳು ಯಥೇಚ್ಚವಾಗಿ ಲಭ್ಯವಿರುವ ಸ್ಥಳಗಳಲ್ಲಿ ಸಮಪಾತಳಿಯ ಮೇಲೆ ಮಣ್ಣಿನ ಬದುವಿಗೆ ಬದಲಾಗಿ ಗುಂಡುಕಲ್ಲಿನ ಬದುಗಳನ್ನು ನಿರ್ಮಿಸಲಾಗುವುದು. ಬದುಗಳ ನಡುವಿನ ಅಂತರವು ಮಣ್ಣಿನ ಬದುವಿಗೆ ಸೂಚಿಸಿರುವಂತೆ, ಈ ಬದುವಿನ ಗಾತ್ರವು ಮುಖ್ಯ ಬದುವಾದಲ್ಲಿ 0.338 ಚ.ಮೀ, ಅಂತರ ಬದು ನಿರ್ವಹಣೆಗೆ ಅಳವಡಿಸಿದಲ್ಲಿ 0.09 ಚ.ಮೀ. ಗಾತ್ರ ಸಾಕಾಗುವುದು.

 

ಕಂದಕದೊಂದಿಗೆ ಬದು (TRENCH CUM BUND) :

 

     ಸಾಗುವಳಿ ಜಮೀನುಗಳಲ್ಲಿ 5 ಮೀ. ಉದ್ದ x 1 ಮೀ ಅಗಲ x 0.6 ಆಳದ ಅಳತೆಯುಳ್ಳ ಕಂದಕಗಳನ್ನು ತೆಗೆದು ಅದರ ಮಣ್ಣಿನಿಂದ ಕಂದಕ ಮತ್ತು ಬದುವಿನ ಮಧ್ಯೆ 0.6 ಮೀ. ಬರ್ಮ್ ಬಿಟ್ಟು ಬದುವನ್ನು ನಿರ್ಮಿಸಲಾಗುವುದು. ಎರಡು ಕಂದಕಗಳ ಮಧ್ಯೆ ಕನಿಷ್ಠ 0.6 ಮೀ ಬರ್ಮ್ ಬಿಟ್ಟು ಕಂದಕದ ಆಳ ಕನಿಷ್ಠ 0.45 ಮೀ. ಹಾಗೂ ಗರಿಷ್ಠ 1 ಮೀ. ಆಳವನ್ನು ಬದುವಿಗೆ ಹೆಚ್ಚಿನ ಗಾತ್ರ ನೀಡಬೇಕಾದಲ್ಲಿ ಅಳವಡಿಸಬಹುದು.

 

     ಕಂದಕದಲ್ಲಿ ನುಗ್ಗೆ ಅಥವಾ ಹುಲ್ಲಿನ ಪ್ರಬೇಧಗಳನ್ನು ಸಹ ಬೆಳಸಬಹುದಾಗಿರುತ್ತದೆ. ಮಣ್ಣಿನ ಬದುಗಳನ್ನು ಸುಸ್ಥಿರಗೊಳಿಸಲು ಬದುಗಳ ಮೇಲೆ ಸ್ಥಳಕ್ಕೆ ಸೂಕ್ತವಾದ ಹಾಗೂ ರೈತರ ಅಗತ್ಯತೆ ಪೂರೈಸುವ ಹುಲ್ಲಿನ ಬೀಜದ ಬಿತ್ತನೆ, ಹುಲ್ಲಿನ ಬೇರುಗಳ ನಾಟಿ ಮಾಡಿ, ಅರಣ್ಯ ಸಸಿ ಅಥವಾ ತೋಟಗಾರಿಕೆ ಹಾಗೂ ಹಿಪ್ಪು ನೇರಳೆ ಸಸಿಗಳನ್ನು ಬೆಳೆಸುವುದು ಸೂಕ್ತ.

 

ಕ್ಷೇತ್ರ ಬದು:

 

     ಸಣ್ಣ ಹಿಡುವಳಿಯಿದ್ದಾಗ ಈಗಾಗಲೇ ಬದುಗಳ ನಿರ್ಮಾಣವಾಗಿದ್ದು ಕಾರಣಾಂತರದಿಂದ ಬದುವಿನ ಗಾತ್ರವು ಕಡಿಮೆಯಾಗಿದ್ದರೆ ಅಂತಹ ಪ್ರದೇಶದಲ್ಲಿ ತಿರುಗಾಡಿ, ಸರ್ವೆ ನಂಬರುವಾರು ಹಾಲಿಯಿರುವ ಬದುಗಳನ್ನು ನಕ್ಷೆಯ ಮೇಲೆ ಗುರುತು ಹಾಕಿ ಕೊಳ್ಳಬೇಕು. ಈ ಬದುಗಳಿಗೆ ಕ್ರಮ ಸಂಖ್ಯೆ ಕೊಟ್ಟು ಅವುಗಳ ಉದ್ದ ಮೇಲಿನ ಮತ್ತು ಬುಡದ ಅಗಲ ಹಾಗೂ ಎತ್ತರವನ್ನು ದಾಖಲಿಸಿಕೊಳ್ಳಬೇಕು. ಬದುವಿನ ಸರಾಸರಿ ಗಾತ್ರವನ್ನು ಲೆಕ್ಕಾಚಾರ ಹಾಕಿ ಶಿಫಾರಸ್ಸು ಮಾಡಿದ ಗಾತ್ರದಲ್ಲಿ ಪರಿಗಣಿಸಿ ಮಣ್ಣಿನ ಪರಿಮಾಣವನ್ನು ಅಂದಾಜು ಮಾಡುವುದು.

 

 ನೀರು ದಾರಿಗಳು :

 

     ಸಾಗುವಳಿ ಪ್ರದೇಶದ ಹೆಚ್ಚುವರಿ ಮಳೆಯ ನೀರನ್ನು ಸುರಕ್ಷಿತವಾಗಿ ಹೊರಹಾಕಲು ಇಳಕಲು ಗುಂಟ ನೀರುದಾರಿಗಳನ್ನು ನಿರ್ಮಿಸಬೇಕು. ನೀರು ದಾರಿಯ ಗಾತ್ರವನ್ನು ತಿರುವುಗಾಲುವೆಗೆ ವಿನ್ಯಾಸಗೊಳಿಸುವ ಮಾದರಿಯಲ್ಲೇ ಕಂಡುಕೊಳ್ಳುವುದು. ಆಕಾರ ತ್ರಾಪಿಜ್ಯ / ಪ್ಯಾರಬಾಲಿಕ್. ನೀರು ದಾರಿ ಉದ್ದಕ್ಕೂ 1 ಮೀ. ಎತ್ತರಾಂತರದಲ್ಲಿ ಲಭ್ಯವಿರುವ ಸ್ಥಳಕ್ಕನುಗುಣವಾಗಿ 1 ಮೀ/1.5 ಮೀ ಉದ್ದ, ಅಗಲ, ಆಳದ ಗುಂಡಿಗಳನ್ನು ತೆಗೆಯಬೇಕು. ಇವು ವೇಗ ತಡೆಗಳಾಗಿ ಹಾಗೂ ಹೂಳನ್ನು ಹಿಡಿದಿಡುವ ಗುಂಡಿಗಳಾಗಿ ಕೆಲಸ ನಿರ್ವಹಿಸುವುವು. ಸಡಿಲ ಮಣ್ಣಿನಲ್ಲಿ ವೇಗ ತಡೆಗಳಾಗಿ ಸಸ್ಯ ಮೂಲದ ತಡೆಗಳನ್ನು ನಿರ್ಮಿಸಬೇಕು. ವಿನ್ಯಾಸ ಮತ್ತು ನಿರ್ಮಾಣವು ಕಂಟೆ ತಡೆಗಳಿಗೆ ನಿಗದಿಪಡಿಸಿದಂತೆ ಇರುತ್ತದೆ.

 

ಭೂಮಿ ಮಟ್ಟ ಮಾಡುವುದು (ಲ್ಯಾಂಡ್ ಲೆವೆಲಿಂಗ್)

 

     ಭೂಮಿಯ ಮೇಲ್ಮೈಯನ್ನು ನಿಗದಿತ ಇಳಿಜಾರು ಕೊಟ್ಟು ಇದರ ಮೇಲೆ ಹರಿದುಹೋಗುವ ನೀರನ್ನು ತಡೆದು ಮಣ್ಣನ್ನು ಕೊಚ್ಚಿಕೊಂಡು ಹೋಗದ ಹಾಗೆ ಹಾಗೂ ಭೂಮಿಯಲ್ಲಿ ನೀರು ಇಂಗುವಂತೆಮಾಡಲು, ಹಾಗೂ ಭೂಮಿಯ ಮೇಲೆ ಎಲ್ಲ ಕಡೆಗೆ ಸಮನಾಗಿ ನಿಲ್ಲುವಂತೆ ಮಾಡಿ ಹೆಚ್ಚಾದ ನೀರು ಸುರಕ್ಷಿತವಾಗಿ ಹರಿದು ಹೋಗಲು ಅವಕಾಶ ಮಾಡುವುದಕ್ಕೆ ಭೂಮಿ ಮಟ್ಟ ಮಾಡುವುದು ಎನ್ನುವರು.

 

ಜಗತಿ ಕಟ್ಟೆ (Bench Terrace)

 

     ಕಡಿದಾದ ಇಳಿಜಾರು ಭೂಮಿಯನ್ನು ಮಟ್ಟಮಾಡಿ ಸಾಗುವಳಿಗೆ ಅನುಕೂಲವಾಗುವಂತೆ ಹಂತಗಳನ್ನಾಗಿ ಪರಿವರ್ತಿಸುವುದು. ಜಗತಿ ಕಟ್ಟೆ ನಿರ್ಮಿಸಬೇಕಾದರೆ ಎಲ್ಲಿ ಭೂಮಿಯ ಇಳಿಜಾರು ಪ್ರತಿಶತ 8 ಕ್ಕಿಂತ ಹೆಚ್ಚಿಗೆ ಮತ್ತು 15 ರವರೆಗೆ ಇರುವುದೋ ಅಂತಹ ಜಮೀನಿನಲ್ಲಿ ಜಗತಿ ಕಟ್ಟೆ ನಿರ್ಮಿಸಬೇಕು.

 

ವಾರಡಿ ಬದು (Graded Bund) / ಇಳುಕಲುಗುಂಟ ಬದು

 

ಅಧಿಕ ಮಳೆ ಬೀಳುವ ಪ್ರದೇಶದಲ್ಲಿ (750 ಮೀ.ಮೀ. ಗಿಂತ ಹೆಚ್ಚು) ಹೆಚ್ಚುವರಿ ಮಳೆ ನೀರನ್ನು ಸುರಕ್ಷಿತವಾಗಿ ಸಾಗುವಳಿ ಭೂಮಿಯಿಂದ ನೀರು ದಾರಿಗಳ ಮುಖಾಂತರ ಹೊರಹಾಕಲು ನಿರ್ಮಿಸಲಾಗುವ ಬದು.

 

ಝಿಂಗ್ ಟೆರೇಸಸ್ :

 

     ಜಿಂಗ್ ಟೆರೇಸಸ್ ಅನ್ನು ಝಿಂಗ್ ಅಟ್ಟಣಿಗಳು ಅಂತಲೂ ಕರೆಯಲಾಗುತ್ತದೆ. ಈ ವಿನ್ಯಾಸವನ್ನು ಎ.ಡಬ್ಲು. ಜಿಂಗ್ ಎಂಬ ವಿಜ್ಞಾನಿಯು ಅಭಿವೃದ್ಧಿ ಪಡಿಸಿದ್ದರಿಂದ ಇದಕ್ಕೆ ಝಿಂಗ್ ಟೆರೇಸಿಂಗ್ ಎಂದು ಕರೆಯಲಾಗುತ್ತಿದೆ. ಇದು ಸಹ ಸಮಪಾತಳಿ ಬದುವಿನಂತೆ ಮಣ್ಣಿನ ಏರಿ ಹಾಕಿ ಒಡ್ಡನ್ನು ಸಮಪಾತಳಿ ರೇಖೆಗುಂಟ ನಿರ್ಮಿಸುವುದು. ಆದರೆ, ಎರಡು ಬದುಗಳ ಮಧ್ಯವಿರುವ ಜಾಗವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿ ಮೇಲ್ಭಾಗದ 2/3ಜಾಗವನ್ನು ದಾನಿ ಸ್ಥಳವೆಂದು ಕೆಳಭಾಗದ 1/3 ಸ್ಥಳವನ್ನು ಸ್ವೀಕೃತಿ ಸ್ಥಳವೆಂದು ಕರೆಯಲಾಗುತ್ತದೆ. ತಳಭಾಗದ 1/3 ಸ್ಥಳವನ್ನು ಸಮತಟ್ಟು(ಲೆವೆಲ್) ಮಾಡಬೇಕು. ಹೀಗೆ ಮಾಡುವುದರಿಂದ ಮೇಲ್ಭಾಗದ 2/3 ಸ್ಥಳದಿಂದ ಬರುವ ನೀರು ಒಂದೇ ಸಮನಾಗಿ 1/3 ಸ್ಥಳದಲ್ಲಿ ಹರಡುತ್ತದೆ ಹಾಗೂ ಈ ತೇವಾಂಶ ಬೆಳೆಗಳಿಗೆ ದೊರೆಯುತ್ತದೆ. ಇದರಿಂದ ಸಾಧಾರಣ ಹಾಗೂ ಕಡಿಮೆ ಮಳೆ ಬಂದ ವರ್ಷದಲ್ಲಿಯೂ ಸಹ ಕನಿಷ್ಠ ಪಕ್ಷ 1/3 ಭಾಗದಷ್ಟು ಜಮೀನಿನಲ್ಲಿ ಉತ್ತಮ ಬೆಳೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ವಿನ್ಯಾಸವನ್ನು ಮಧ್ಯಮದಿಂದ ಆಳವಾದ ಕಪ್ಪು ಭೂಮಿಗಳಲ್ಲಿ ವಾರ್ಷಿಕ ಮಳೆ ಪ್ರಮಾಣ 950ಮಿ.ಮೀಟರ್‍ಗಿಂತಲೂ ಕಡಿಮೆಯಿದ್ದು, ನೀರಿನ ಇಂಗುವಿಕೆಯ ಮಟ್ಟ ಪ್ರತಿ ಗಂಟೆಗೆ 6 ಮಿ.ಮೀಟರ್ ಹಾಗೂ ಭೂಮಿಯ ಇಳಿಜಾರು ಶೇ.5ರಷ್ಟು ಇರುವಂತಹ ಸ್ಥಳಗಳಲ್ಲಿ ನಿರ್ಮಿಸಬೇಕು. ಝಿಂಗ್ ಅಟ್ಟಣಿಗಳನ್ನು ಹೆಚ್ಚು ಲಾಭದಾಯಕ ಬೆಳೆಗಳನ್ನು ಬೆಳೆಯುವ ಸ್ಥಳಗಳಲ್ಲಿ ಮಾಡುವುದು ಸೂಕ್ತ.

 

  • ಅತೀ ಕಡಿಮೆ ಮಳೆ ಬೀಳುವ ಹಾಗೂ ಕಡಿಮೆ ನೀರು ಇಂಗುವ ಮಣ್ಣಿನ ಪ್ರದೇಶದಲ್ಲಿಯೂ ಸಹ ಅಗಲ ತಳದ ವಾರಡಿ/ಇಳುಕಲುಗುಂಟ ಬದುಗಳನ್ನು ನಿರ್ಮಿಸಬಹುದು.
  • ಮಣ್ಣಿನಲ್ಲಿ ನೀರು ಇಂಗುವಿಕೆಯ ಆಧಾರದ ಮೇಲೆ ಗ್ರೇಡ್ (Slope %) ಅನ್ನು ವಿನ್ಯಾಸಗೊಳಿಸಲಾಗಿದೆ.
  • ಮಳೆಯ ನೀರು ಭೂಮಿಯಲ್ಲಿ ಇಂಗಲು ಸಮಯಾವಕಾಶ ನೀಡಿ, ಭೂ ಸವಕಳಿ ಆಗದ ಹಾಗೆ ಹಾಗೂ ಹೂಳು ನಿಲ್ಲದ ವೇಗದಲ್ಲಿ. ನೀರು ಹರಿಯುವಂತೆ ಬದುವಿಗೆ ಇಳಕಲನ್ನು ವಿನ್ಯಾಸಗೊಳಿಸಲಾಗಿದೆ.
  • ವಾರಡಿಬದುವಿಗೆ (ವರ್ಗೀಕೃತ ಬದು) ಮಣ್ಣಿನ ಗುಣಧರ್ಮಕ್ಕನುಗುಣವಾಗಿ ಇಳಕಲನ್ನು ಕೊಟ್ಟು ನೀರು ದಾರಿ ಇರುವ ಕಡೆ ಅಂತ್ಯಗೊಳಿಸಬೇಕು.
  • ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಬದುಗಳು ಹತ್ತಿರವಿದ್ದು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಬದುಗಳು ದೂರ ದೂರ ಇರುತ್ತದೆ.

 

 ಕೃಷಿ ಹೊಂಡ

 

     ಸಮಪಾತಳಿ ಬದು: ವರ್ಗೀಕೃತ ಬದು: ಸಮಪಾತಳಿ ಬದುಪಟ್ಟಿ : ಜಗತಿಕಟ್ಟೆ ಮತ್ತು ಇತರ ಯಾವುದೇ ಮಣ್ಣು ಮತ್ತು ನೀರು ಸಂರಕ್ಷಣ ಕಾಮಗಾರಿಗಳಿಂದ ಉಪಚರಿಸಲ್ಪಟ್ಟ ಕೃಷಿ ಯೋಗ್ಯ ಜಮೀನಿನಿಂದ ನೀರು ದಾರಿಯಲ್ಲಿ ಹರಿಯುವ ಹೆಚ್ಚುವರಿ ಮಳೆ ನೀರನ್ನು ಆಯ್ದ ಸ್ಥಳದಲ್ಲಿ ಹೊಂಡ ತೆಗೆದು ಜಲ ಸಂಗ್ರಹಿಸುವುದು. ಈ ಜಲ ಸಂಗ್ರಹಣಾ ಕಾಮಗಾರಿಯೇ ಕೃಷಿ ಹೊಂಡ, ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿ ಕೆಳಗಿನ ಉದ್ದೇಶಗಳಿಗೆ ಬಳಕೆ ಮಾಡಬಹುದು.

 

  • ಬೆಳೆಗಳಿಗೆ ಸಂದಿಗ್ಧ ಸಮಯದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸಿ ಖುಷ್ಕಿ ಜಮೀನಿನಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸುವುದು.
  • ಪಶುಪಕ್ಷಿ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಸಸ್ಯ ಸಂರಕ್ಷಣಾ ಕ್ರಮಗಳಿಗೆ ಅವಶ್ಯವಾದ ನೀರು ಒದಗಿಸುವುದು.
  • ಅನುಕೂಲತೆಗಳಿದ್ದಲ್ಲಿ ಅಲ್ಪಾವಧಿ ಮೀನುಗಾರಿಕೆಗೆ ಬಳಸುವುದು.
  • ಕೃಷಿ ಹೊಂಡದ ಒಡ್ಡಿನ ಮೇಲ್ಭಾಗದಲ್ಲಿ ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಬೆಳೆದು ರೈತರ ಆದಾಯ ಹೆಚ್ಚಿಸುವುದು.

 

 

ಸಮಪಾತಳಿ ಬದು ಪಟ್ಟಿ (ಕಾಂಟೂರ್ ಬಾರ್ಡರ್ ಸ್ಟ್ರಿಪ್ಸ್ ):

 

     ಇವು ಸಮತಟ್ಟಾದ ಪಟ್ಟಿಗಳು. ಇವುಗಳನ್ನು ಇಳಕಲಿಗೆ ಅಡ್ಡಲಾಗಿ 0.3ಮೀಟರ್ ಲಂಬ ಅಂತರ (ವರ್ಟಿಕಲ್ ಇಂಟರ್‍ವಲ್) ದಲ್ಲಿ ನಿರ್ಮಿಸಲಾಗುವುದು. ಪ್ರತಿ ಬದುವಿನ ಅಂತ್ಯದಲ್ಲಿ ನೀರು ಹರಿಯುವ ಜಾಗದಲ್ಲಿ ಡ್ರಾಪ್ ಸ್ಟ್ರಕ್ಚರನ್ನು ನಿರ್ಮಿಸಲಾಗುವುದು. ಒಂದು ಪಟ್ಟಿಯು ಇನ್ನೊಂದು ಪಟ್ಟಿಯನ್ನು ಬೇರ್ಪಡಿಸಲು 0.24 ಚ.ಮೀಟರ್‍ನ ಬದುವನ್ನು ನಿರ್ಮಿಸಲಾಗುವುದು. ಈ ವಿನ್ಯಾಸಗಳು ಮಧ್ಯಮ ಹಾಗೂ ಆಳವಾದ ಮಣ್ಣಿನಲ್ಲಿ ಪ್ರತಿ ಗಂಟೆಗೆ 8ಮಿ.ಮೀಟರ್ ನೀರು ಇಂಗುವ ಹಾಗೂ ಸರಾಸರಿ ವಾರ್ಷಿಕ ಮಳೆ 750ಮಿ.ಮೀಟರ್ ಇರುವ ಪ್ರದೇಶಗಳಲ್ಲಿ ನಿರ್ಮಿಸಲಾಗುವುದು.

 

 

II. ಸಾಗುವಳಿಗೆ ಯೋಗ್ಯವಲ್ಲದ ಜಮೀನಿನ ಉಪಚಾರಗಳು

 

ತಿರುವುಗಾಲುವೆ (Diversion Channel)

 

     ಅರಣ್ಯ, ಹುಲ್ಲುಗಾವಲು, ಬೆಟ್ಟಪ್ರದೇಶ ಇತ್ಯಾದಿ ಸಾಗುವಳಿಯಲ್ಲಿ ಇಲ್ಲದ ಜಮೀನುಗಳಿಂದ ಸಾಗುವಳಿ ಜಮೀನಿಗೆ ಬರುವ ನೀರನ್ನು ತಡೆಯಲು ಮತ್ತು ಆ ನೀರನ್ನು ಸುರಕ್ಷಿತವಾಗಿ ನೀರುದಾರಿಗೆ ಅಥವಾ ಜಲವಾಹಿನಿಗೆ ಸಾಗಿಸಲು ತಿರುವುಗಾಲುವೆಯ ಉಪಯೋಗ ಮಾಡಿಕೊಳ್ಳಲಾಗುತ್ತದೆ. ಇದನ್ನು ಸಾಗುವಳಿಯಲ್ಲಿ ಯೋಗ್ಯವಲ್ಲದ ಮತ್ತು ಸಾಗುವಳಿಯಲ್ಲಿ ಇರುವ ಜಮೀನು ಸೇರುವಕಡೆ, ಇಳಿಜಾರಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತದೆ.

 

     ಕಾಲುವೆಯಲ್ಲಿ ನಿಗಧಿತ ಇಳುಕಲು ಕಾಯ್ದುಕೊಳ್ಳಲು ಡ್ರಾಪ್ ಗಳನ್ನು ಅಳವಡಿಸಿಕೊಳ್ಳಬೇಕು. ಅಗೆದ ಮಣ್ಣನ್ನು ಕಾಲುವೆಯ ಕೆಳ ಭಾಗಕ್ಕೆ 0.50 ಮೀ. ಬರ್ಮ ಬಿಟ್ಟು ಬದು ಮಾಡಲು ಉಪಯೋಗಿಸಿಕೊಳ್ಳಬೇಕು. ಈ ಬದು ಕಾಲುವೆಗೆ ಸುರಕ್ಷಿತ ಮಟ್ಟ ಕಾಯ್ದುಕೊಳ್ಳಲು ಸಹಕಾರಿಯಾಗಿದ್ದು, ಇದನ್ನು ಹುಲ್ಲು ಅಥವಾ ಇತರೇ ಸಸ್ಯಗಳಿಂದ ಬಲಪಡಿಸಬೇಕು. ತಿರುವುಗಾಲುವೆಯನ್ನು ಕೋಡಿಕಡೆಯಿಂದ ಪ್ರಾರಂಭಿಸಬೇಕು. ತಿರುವುಗಾಲುವೆಯನ್ನು 0.2 % ರಿಂದ 0.40 % ಇಳುಕಲು ಪಾತಳಿ ರೇಖೆಯ (ಗ್ರೇಡೆಡ್ ಕಾಂಟೂರ್)ಮೇಲೆ ನಿರ್ಮಿಸಬೇಕು.

 

ಜಲಮರುಪೂರಣ ಹೊಂಡ (ರೀಚಾರ್ಜ್ ಪಾಂಡ್) ಕಲ್ಯಾಣಿ

 

     ಸಾಗುವಳಿಯೇತರ ಜಮೀನುಗಳಲ್ಲಿ ಹಾಗೂ ಜಲವಾಹಿನಿಯ ಹತ್ತಿರದಲ್ಲಿ ಮಟ್ಟವಾದ ಭೂ ಪ್ರದೇಶವಿದ್ದರೆ ಜಲಸಂಗ್ರಹಿಸಲು ಬಹೂಪಯೋಗಿ ಕಾಮಗಾರಿಯಾದ ಕಲ್ಯಾಣಿ / ಜಲಮರುಪೂರಣ ಹೊಂಡಗಳನ್ನು ನಿರ್ಮಿಸಲಾಗುವುದು. ಅಗೆದ ಮಣ್ಣಿನಿಂದ ಹೊಂಡದ ಸುತ್ತಲೂ ಮೂರು ಕಡೆ 1.5 ಮೀ. ಬರ್ಮ್ ಬಿಟ್ಟು ಬದು ನಿರ್ಮಿಸುವುದು. ಬದುವಿನ ಸುತ್ತ ಹೊರಗಡೆ ಕತ್ತಾಳೆಯಿಂದ ಬದು ಬಲಪಡಿಸುವುದು. ಮೇಲ್ಬಾಗದ ಸಡಿಲಮಣ್ಣಿನ ಆಳದವರೆಗೆ ಮೂರು ದಂಡೆಗಳಲ್ಲಿ ಪಾಯ ತೆಗೆದು ಒಣಕಲ್ಲು ಪಿಚ್ಚಿಂಗ್ ಮಾಡುವುದು.

 

  • ವ್ಯವಸಾಯ ಯೋಗ್ಯವಲ್ಲದ ಜಮೀನಿನಿಂದ ಬರುವ ನೀರಿನ ಶೇಖರಣೆ
  • ಮಳೆ ಪ್ರಮಾಣ ಮತ್ತು ನೀರು ಹರಿದು ಬರುವ ವಿಸ್ತೀರ್ಣ ಆಧರಿಸಿ ಗಾತ್ರ ನಿರ್ಧಾರ.
  • ಪಶು ಪಕ್ಷಿ ಮತ್ತು ಜನ ಜಾನುವಾರುಗಳ ಅಗತ್ಯತೆಗೆ ನೀರು ಹಾಗೂ ಅಂತರ್ಜಲ ಮರುಪೂರಣ.

 

ಸಸ್ಯ ಶೋಧಕ ಪಟ್ಟಿ:

 

     ಸಸ್ಯ ಶೋಧಕ ಪಟ್ಟಿಯನ್ನು ವ್ಯವಸಾಯ ಯೋಗ್ಯವಲ್ಲದ ಜಮೀನಿನಿಂದ ವ್ಯವಸಾಯ ಯೋಗ್ಯ ಜಮೀನಿಗೆ ಬರುವ ನೀರನ್ನು ತಡೆಯುವ ಸಲುವಾಗಿ ಕಡಿಮೆ ಇಳಿಜಾರಿರುವ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಇದನ್ನು ಅಳವಡಿಸುವಾಗ 0.3 ಮೀ ಆಳ ಮತ್ತು 0.3 ಮೀ ಅಗಲದ ಎರಡು ಕಂದಕಗಳನ್ನು 1.5 ಮೀ ಅಂತರ ಬಿಟ್ಟು ತೆಗೆಯುವುದು. ಇದರಲ್ಲಿ ಅರಣ್ಯ ಸಸಿಗಳನ್ನು ಕಡಿಮೆ ಅಂತರ ಕೊಟ್ಟು ನೆಡುವುದು. ಈ ಕಂದಕಗಳ ಮದ್ಯೆ 0.3 ಮೀ ಆಳ ಮತ್ತು 0.3 ಮೀ ಅಗಲದ 3 ಕಂದಕಗಳನ್ನು ತೆಗೆದು 0.3 ಮೀ ಅಂತರದಲ್ಲಿ ಕತ್ತಾಳೆ/ಐಪೋಮಿಯ/ಇತರೆ ಕಂಟಿ ಗಿಡಗಳನ್ನು ನೆಟ್ಟು ಅಭಿವೃದ್ಧಿ ಪಡಿಸುವುದು. ತಿರುವುಗಾಲುವೆಗೆ ಬದಲಾಗಿ ಸಾಗುವಳಿಗೆ ಯೋಗ್ಯವಲ್ಲದ ಮತ್ತು ಸಾಗುವಳಿ ಭೂಮಿಗಳ ನಡುವೆ ಸಸ್ಯ ಶೋಧಕಪಟ್ಟಿ ಕೊಡಬಹುದು.

 

ಸಮಪಾತಳಿ ಕಂದಕ:

 

ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಸಮಪಾತಳಿ ರೇಖೆಯ ಮೇಲೆ ಇಳಿಜಾರಿಗನುಗುಣವಾಗಿ ನಿಗದಿತ ಅಂತರದಲ್ಲಿ 0.45 ಮೀ ಆಳ, 0.6 ಮೀ ಅಗಲ, ಮತ್ತು ಗರಿಷ್ಠ 15 ಮೀ. ಉದ್ದದ ಕಂದಕ.

ಶೇ. 5 ಭೂ ಇಳಿಜಾರಿಗೆ 10 ಮೀ, ಶೇ. 5-10 ಭೂ ಇಳಿಜಾರಿನವರೆಗೆ 7.5 ಮೀ. ಮತ್ತು ಶೇ.10-20 ರವರೆಗೆ ಭೂ ಇಳಿಜಾರಿಗೆ 5 ಮೀ ಅಂತರಗಳಲ್ಲಿ ಕಂದಕ.

ತೆಗೆದ ಮಣ್ಣನ್ನು ಕಂದಕದ ಕೆಳಭಾಗಕ್ಕೆ 0.3 ಮೀ ಅಂತರ ಬಿಟ್ಟು ಹಾಕುವುದು.

ಕಂದಕಗಳಲ್ಲಿ ಸೂಕ್ತ ಅರಣ್ಯ/ಖುಷ್ಕಿ ತೋಟಗಾರಿಕೆ ಸಸ್ಯಗಳನ್ನು ನೆಡುವುದು.

 

ಅರ್ಧಚಂದ್ರಾಕೃತಿಯ ಬದುಗಳು:

 

  • ಭೂಮಿಯಲ್ಲಿ ಹೆಚ್ಚು ಏರು ಪೇರುಗಳು ಇದ್ದಾಗ ಅರಣ್ಯ/ತೋಟಗಾರಿಕೆ ಸಸಿಗಳನ್ನು ನೆಡಲು ನಿರ್ಮಾಣ.
  • ಗುಂಡಿಯಿಂದ ತೆಗೆದ ಮಣ್ಣಿನಿಂದ ಅದರ ಕೆಳಭಾಗದಲ್ಲಿ ಅರ್ಧಚಂದ್ರಾಕೃತಿಯ ಬದುಗಳನ್ನು ನಿರ್ಮಿಸಲಾಗುವುದು.
  • ಅರಣ್ಯ ಸಸಿಗಳಿಗೆ 0.5 ಮೀ ಅಗಲ, 0.5 ಮೀ ಉದ್ದ ಮತ್ತು 0.5 ಮೀ ಆಳ ಮತ್ತು ತೋಟಗಾರಿಕೆ ಸಸಿ ನೆಡಲು 1 ಮೀ ಅಗಲ, 1 ಮೀ ಉದ್ದ ಮತ್ತು 1 ಮೀ ಆಳದ ಗುಂಡಿಗಳನ್ನು ತೋಡಲಾಗುವುದು.

 

ವಾರಡಿ ಕಂದಕ

 

     ಎಲ್ಲಿ ವಾರ್ಷಿಕ ಮಳೆಯ ಪ್ರಮಾಣ 750 ಮಿಮಿ ಗಿಂತ ಹೆಚ್ಚಿಗೆ ಇರುವುದೋ ಅಲ್ಲಿ ನೀರನ್ನು ಸುರಕ್ಷಿತವಾಗಿ ಹೊರಹಾಕುವುದು ಮುಖ್ಯ ಉದ್ದೇಶ. ಅದಕ್ಕಾಗಿ ವಾರಡಿ ಬದುಗಳಿಗೆ ಕೊಟ್ಟ ಹಾಗೆ ಸಮಾಪಾತಳಿ ರೇಖೆಗೆ 0.2 ರಿಂದ 0.5 ಪ್ರತಿಶತ ಇಳಿಜಾರು ಕೊಟ್ಟು ವಾರಡಿ ರೇಖೆಯನ್ನು ಗುರುತಿಸಿ. ಅದರ ಗುಂಟ 0.6 ಮೀ ಅಗಲ 0.45 ಮೀ ಅಳದ ಕಂದಕಗಳನ್ನು ತೆಗೆದು ಮಣ್ಣನ್ನು ಕೆಳಬದಿಗೆ ಬದುವಿನ ಅಕಾರದಲ್ಲಿ ಹಾಕಿ ಕಂದಕದ ಗುಂಟ ನೀರು ಹರಿದುಹೋಗಲು ಅವಕಾಶ ಮಾಡಬೇಕು. ಮುಖ್ಯವಾಗಿ ಇದಕ್ಕೆ ಯಾವುದಾದರೂ ಒಂದುಬದಿಗೆ ಅದರ ನೀರು ಹರಿದು ಹೋಗಲು ನೀರುದಾರಿ / ಹಳ್ಳ / ನಾಲಾ ಇರಲೇಬೇಕು.

 

     ಜಲಾನಯನದ ಸಾಗುವಳಿಗೆ ಯೋಗ್ಯವಲ್ಲದ ಜಮೀನಿನಲ್ಲಿ ಮೇಲೆ ತಿಳಿಸಿದ ಅವಿಚ್ಛಿನ ಸಮಪಾತಳಿ ಕಂದಕ, ಪರ್ಯಾಯ ಸಮಪಾತಳಿ ಕಂದಕ ಹಾಗೂ ವಾರಡಿ ಕಂದಕಗಳನ್ನು ತೆಗೆದು ಇವುಗಳಲ್ಲಿ ಅರಣ್ಯ ಗಿಡಗಳನ್ನು ಹಚ್ಚಬೇಕು. ಮೇಲೆ ತಿಳಿಸಿದ ಎರಡೂ ಕಂದಕಗಳ ಮಧ್ಯದಲ್ಲಿ ಚಿಕ್ಕ ಜಲಾನಯನ ಕ್ಷೇತ್ರವಿರುವುದರಿಂದ ಅಲ್ಲಿ ಕೆಳಕಂಡ ವಿವಿಧ (ರೀತಿಯ) ಆಕಾರದ ಸಣ್ಣ ಸಣ್ಣ ಕಂದಕಗಳನ್ನಾಗಿ ಅವುಗಳ ಮೇಲ್ಬದಿಗೆ ಹಣ್ಣಿನ ಗಿಡಗಳನ್ನಾಗಲಿ ಅರಣ್ಯ ಗಿಡಗಳನ್ನಾಗಲಿ ಹಚ್ಚಬಹುದು.

 

 

III. ಜಲವಾಹಿನಿಯ ಉಪಚಾರಗಳು

 

ಮೇಲು ಸ್ಥರದ ಉಪಚಾರಗಳು

 

ಕೊರಕಲು ತಡೆಗಳು(Gully Checks):

 

   ಕೊರಕಲು ಸಮಸ್ಯೆಗೆ ಕಾರಣಗಳು :

 

  • ಹರಿದು ಬರುವ ನೀರು ಎತ್ತರದಿಂದ ಕೊರಕಲಿಗೆ ಬಿದ್ದಾಗ ಕೊಚ್ಚಣೆಗೆ ಕಾರಣವಾಗುತ್ತದೆ.
  • ಸಣ್ಣ ಕೊರಕಲುಗಳಲ್ಲಿ ನೀರು ಹರಿದು ಹೊಲಗಳಿಗೆ ಹರಿದು ಹೋಗುವುದು, ನೀರಿನ ರಭಸಕ್ಕೆ ತಳ ಕೊರೆದು ಆಳವಾಗುತ್ತದೆ. ಇದರಿಂದ ಕೊರಕಲು ಆಳ ಮತ್ತು ಅಗಲವಾಗುತ್ತದೆ.
  • ಮೇಲಿಂದ ಮೇಲೆ ಕೊರಕಲ ದಂಡೆಗಳು ತೊಯ್ಯುವುದು ಮತ್ತು ಒಣಗುವುದರಿಂದಲೂ ಕೊರಕಲಿನ ದಂಡೆ ಕುಸಿದು ಅದು ಅಗಲವಾಗಲು ಅನುಕೂಲವಾಗುತ್ತದೆ.

  ಕೊರಕಲುಗಳು V ಆಕಾರ ಅಥವಾ U ಆಕಾರದಲ್ಲಿ ಇರಬಹುದು. ಕೊರಕಲಿನ ಗಾತ್ರ, ಮತ್ತು ಜಲಾನಯನ ಪ್ರದೇಶದಿಂದ ಬರುವ ನೀರಿನ ಪ್ರಮಾಣವನ್ನು ಮುಖ್ಯವಾಗಿ ಗಣನೆಗೆ ತೆಗೆದುಕೊಂಡು ಅವುಗಳನ್ನು ನಿಯಂತ್ರಿಸಲು ಯೋಜನೆಗಳನ್ನು ತಯಾರಿಸಬೇಕಾಗುತ್ತದೆ.

 

ನೀರು ಇಂಗು ಗುಂಡಿ (Water recharge pit):

 

     ಕೊಳವೆ ಬಾವಿಗಳಿಂದ ತೀವ್ರವಾಗಿ ಅಂತರ್ಜಲವನ್ನು ಉಪಯೋಗಿಸಿ ಕೊಳ್ಳುತ್ತಿರುವುದರಿಂದ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗಿದೆ. ನೀರು ಇಂಗುವ ಸಾಮರ್ಥ್ಯ ಕಡಿಮೆ ಇರುವ ಪ್ರದೇಶದಲ್ಲಿ ಹರಿದು ಹೋಗುವ ಮಳೆಯ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಲು ಕೊರಕಲು: ಹಳ್ಳಗಳನ್ನು ಇತರೆ ವಿನ್ಯಾಸಗಳಿಂದ ಉಪಚರಿಸಲ್ಪಟ್ಟಿದ್ದು, ಕೊಚ್ಚಿ ಬರುವ ಹೂಳಿನ ಪ್ರಮಾಣ ಕಡಿಮೆ ಇರಬೇಕು. ಕನಿಷ್ಟ 2 ಹೆಕ್ಟೇರ್ ನೀರು ಬಸಿಯುವ ವಿಸ್ತೀರ್ಣವುಳ್ಳ ನೀರು ದಾರಿಗಳಲ್ಲಿ ಕೊಳವೆ ಬಾವಿ ಸಮೀಪ ಇಂಗು ಗುಂಡಿಗಳನ್ನು ನಿರ್ಮಿಸಿ ಭೂ ಜಲಮಟ್ಟ ಹೆಚ್ಚಿಸಬಹುದು. ಕಟ್ಟಡಗಳ ಚಾವಣಿಯಿಂದ ಮಳೆಯ ನೀರು ಸಂಗ್ರಹಿಸಿ ಇಂಗಿಸಲು ಸಹ ಇಂಗುಗುಂಡಿಯನ್ನು ನಿರ್ಮಿಸಬಹುದು.

 

ಗ್ಯಾಬಿಯನ್ ತಡೆ

 

ಚೌಕಾಕಾರದ ಜಿ.ಐ.ತಂತಿ ಚಾಳಿಗೆಯನ್ನು ಅಗತ್ಯಕ್ಕೆ ತಕ್ಕಂತೆ ಕತ್ತರಿಸಿಕೊಂಡು ಗುಂಡು ಕಲ್ಲುಗಳನ್ನು ತುಂಬಿ ನಿರ್ಮಾಣ. ಎರಡು ತಡೆಗಳ ಮದ್ಯದ ಅಂತರವು ತಡೆಯ ಎತ್ತರದ ಎರಡು ಪಟ್ಟು ಎತ್ತರಾಂತರ.

ಸ್ಧಳ:

 

ಸಡಿಲ ಮಣ್ಣಿನ ಕೊರಕಲುಗಳು.

ನೀರಿನ ಪ್ರವಾಹದಲ್ಲಿ ಬರಿ ಕಲ್ಲಿನ ತಡೆಗಳು ಕೊಚ್ಚಿ ಹೋಗುವ ಸಂದರ್ಭ.

ಕೊರಕಲುಗಳಿಗೆ ನೀರು ಹರಿದು ಬರುವ ವಿಸ್ತೀರ್ಣ 15 ಹೆಕ್ಟೇರ್ ವರೆಗೆ.

 

 ಉಪಯೋಗ :

 

  • ಕೊರಕಲು ಆಳವಾಗುವುದನ್ನು ನಿಯಂತ್ರಿಸುವುದು.
  • ಕೊರಕಲು ಅಗಲವಾಗಿ ಜಮೀನನ್ನು ಅಕ್ರಮಿಸುವುದನ್ನು ತಡೆಗಟ್ಟುವುದು.
  • ಹೂಳನ್ನು ತಡೆಯುವುದು.
  • ಕೊರಕಲಿನ ಇಳಿಜಾರನ್ನು ಕಡಿಮೆ ಮಾಡುವುದು.
  • ಕೊರಕಲಿನಲ್ಲಿ ಸಸ್ಯ ಬೆಳವಣೆಗೆಗಳನ್ನು ಉತ್ತೇಜಿಸುವುದು.

 

ಮರಳು ತುಂಬಿದ ಚೀಲಗಳ ತಡೆ

 

     ಮರಳು ತುಂಬಿದ ಚೀಲಗಳ ತಡೆಗಳನ್ನು ಹರಿಯುವ ನೀರಿಗೆ ಅಡ್ಡಲಾಗಿ ಹಾಕಿದಾಗ ಇದರ ಮುಖ್ಯ ಉದ್ದೇಶ ಭೂಸವಕಳಿಯ ವೇಗವನ್ನು ತಡೆದು, ಭೂಮಿಯಲ್ಲಿ ನೀರು ಇಂಗುವಂತೆ ಮಾಡಿ, ಮಹಾಪೂರದ ವಿಕೋಪವನ್ನು ತಡೆಯುವುದು. ಇದಕ್ಕಾಗಿ ರಸಗೊಬ್ಬರದ ಖಾಲಿ ಚೀಲಗಳನ್ನಾಗಲಿ ಅಥವಾ ಸಿಮೇಂಟ ಚೀಲಗಳನ್ನು ಉಪಯೋಗಿಸಬಹುದು. ಮರಳು ಉತ್ತಮ ಗುಣಮಟ್ಟದ್ದಾಗಿರಬೇಕು ಹಾಗು ಸ್ಥಳದಲ್ಲಿಯೇ ಲಭ್ಯವಿರಬೇಕು. ಇದರ ಉದ್ದ ಮತ್ತು ಅಗಲಳತೆಗಳು ಹರಿದು ಬರುವ ನೀರಿನ ಜಲಾನಯನ ಕ್ಷೇತ್ರ ಹಾಗು ಹಳ್ಳದ ತಳದ ಅಗಲ ಮತ್ತು ಹಳ್ಳದ ಆಳ ಇವುಗಳ ಮೇಲೆ ಅವಲಂಬಿಸಿರುತ್ತದೆ.

 

ಈ ರಚನೆಗಳು ಕಡಿಮೆ ಖರ್ಚಿನದಾಗಿದ್ದು, ಸುಲಭವಾಗಿ ರಚಿಸಬಹುದಾದ ತಾಂತ್ರಿಕ ರಚನೆಯಾಗಿದ್ದು, ಯಾವುದೇ ರೀತಿಯ ಮಣ್ಣು ಮತ್ತು ಮಳೆಯ ಪ್ರಮಾಣದ ಪ್ರದೇಶಗಳಲ್ಲಿ ಅಳವಡಿಸಬಹುದು.

 

ಗೋಕಟ್ಟೆ

 

     ಇಂದಿನ ದಿನಗಳಲ್ಲಿ ಜಾನುವಾರುಗಳ ಸಂಖ್ಯೆ ಕುಸಿಯುತ್ತಿದ್ದು, ಇದ್ದಂತಹ ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ಯಾವದೇ ಸೌಲಭ್ಯಗಳು ಹಲವಾರು ಗ್ರಾಮಗಳಲ್ಲಿ ಕಂಡು ಬರುವುದಿಲ್ಲ. ಈ ಮೊದಲು ಪ್ರತಿ ಊರಿಗೆ ದನಕರುಗಳ ನೀರಿನ ಉಪಯೋಗಕ್ಕಾಗಿ ಊರಿನ ಹೊರಗಡೆ ನೈಸರ್ಗಿಕ ಹಳ್ಳಗಳಿದ್ದಲ್ಲಿ ಗೋಕಟ್ಟೆ ನಿರ್ಮಿಸಿ ನೀರಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಜನಸಂಖ್ಯೆ ಬೆಳೆದಂತೆ ಇದ್ದ ಗೋಕಟ್ಟೆಗಳು ಮುಚ್ಚಿಹೋಗಿ ಈ ವ್ಯವಸ್ಥೆ ಹಾಳಾಗಿ ದನಕರುಗಳು ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತವಾಗಿವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು, ಪ್ರತಿಯೊಂದು ಹಳ್ಳಿಯಲ್ಲಿ ಒಂದು ಗೋಕಟ್ಟೆ ನಿರ್ಮಿಸಿ, ಹಳ್ಳಿಗಳ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಇಂದಿನ ಆವಶ್ಯಕತೆಯಾಗಿದೆ.

 

     ಸುಮಾರು 50 x 50 ಮಿ. ಅಳತೆಯ ಒಂದು ಗೋಕಟ್ಟೆಯನ್ನು 2 ಮಿ. ಆಳಕ್ಕೆ 2:1 ಬದಿ ಇಳಿಜಾರು ಕೊಟ್ಟು ನಿರ್ಮಿಸಿದರೆ, ಆ ಗೋಕಟ್ಟೆಯಲ್ಲಿ ಸುಮಾರು 5 ತಿಂಗಳವರೆಗೆ 500 ದನಕರುಗಳಿಗೆ ನಿರಂತರವಾಗಿ ನೀರಿನ ಸೌಕರ್ಯ ಒದಗಿಸಬಹುದಾಗಿದೆ. (ಪ್ರತಿ ದಿನಕ್ಕೆ ಆಕಳು-10 ಲಿ., ಎಮ್ಮೆ-10 ಲಿ., ಆಡು ಮತ್ತು ಕುರಿ 8 ಲಿ., ಕುಡಿಯಲು ಹಾಗು ಇನ್ನಿತರ ಉಪಯೋಗಕ್ಕಾಗಿ).

 

IV. ಕೆಳಸ್ತರದ ಉಪಚಾರಗಳು

 

ತಡೆ ಆಣೆ (ಚೆಕ್ ಡ್ಯಾಮ್)

 

ಇದು ಆಳವಾದ ಹಳ್ಳಗಳಿಗೆ ಅಡ್ಡಲಾಗಿ ಕಟ್ಟಿದ ಕಲ್ಲು ಸಿಮೆಂಟ್ ಗಾರೆಯ ರಚನೆ ಆಗಿರುತ್ತದೆ :

 

ಉದ್ದೇಶಗಳು:

 
  • ಹರಿದು ಹೋಗುವ ನೀರನ್ನು ತಡೆಗಟ್ಟಿ ಭೂಮಿಯಲ್ಲಿ ಇಂಗುವಂತೆ ಮಾಡುವುದು.
  • ಭೂಮಿಯಲ್ಲಿಯ ಅಂತರ್ಜಲ ಪಾತಳಿಯನ್ನು ಹೆಚ್ಚಿಸುವುದು.
  • ಹಳ್ಳಗಳಲ್ಲಿ ಬಹಳ ದಿನಗಳವರೆಗೆ ನೀರು ಲಭ್ಯವಾಗುವಂತೆ ಮಾಡುವುದು.
  • ಬೆಳೆಗಳಿಗೆ ಸಸ್ಯ ಸಂರಕ್ಷಣಾ ರಾಸಾಯನಿಕಗಳನ್ನು ಸಿಂಪಡಿಸಲು ನೀರು ದೊರೆಯುವಂತೆ ಮಾಡುವುದು.
  • ದನ ಕರುಗಳಿಗೆ ಕುಡಿಯಲು ಮತ್ತು ಗೃಹ ಬಳಕೆಗೆ ನೀರು ಒದಗುವಂತೆ ಮಾಡುವುದು.
  • ರಕ್ಷಣಾತ್ಮಕ ನೀರಾವರಿಗೆ ನೀರನ್ನು ಬಳಸಿ ಕೃಷಿ ಉತ್ಪಾದನೆ ಹೆಚ್ಚಾಗಲು ನೆರವಾಗುವುದು.
  • ಹಳ್ಳಗಳು ಮುಂದಕ್ಕೆ ಹರಿದಂತೆ ಹೆಚ್ಚು ಆಳ ಹಾಗೂ ಅಗಲವಾಗುವುದನ್ನು ತಡೆಗಟ್ಟುವುದು.
  • ದೊಡ್ಡ ಜಲಾಶಯಗಳು ಹೂಳು ತುಂಬುವುದನ್ನು ತಡೆದು ಅವುಗಳ ಆಯುಷ್ಯವನ್ನು ಹೆಚ್ಚಿಸುವುದು.

 

ನಾಲಾ ಬದು

 

ಉದ್ದೇಶಗಳು:

 
  • ಸಂಗ್ರಹಿಸಿದ ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದು
  • ಅಂತರ್ಜಲ ಅಸಮತೋಲನ ನಿವಾರಿಸುವುದು
  • ಬಾವಿಗಳಿಂದ ನೀರಾವರಿ ಕ್ಷೇತ್ರ ಹೆಚ್ಚಿಸುವುದು
  • ಕುಡಿಯುವ ನೀರಿನ ನಿರಂತರ ಪೂರೈಕೆ ಆಗುವಂತೆ ಮಾಡುವುದು
  • ಸಂದಿಗ್ಧ ಹಂತದಲ್ಲಿ ಬೆಳೆಗಳ ವೈಫಲ್ಯತೆ ನಿವಾರಿಸುವುದು
  • ಉದ್ಯೋಗಾವಕಾಶ ಹೆಚ್ಚಿಸುವುದು

 

ಜಿನುಗುಕೆರೆ/ಬಸಿ ಕೊಳ

 

     ನಾಲಾ ಬದುವಿನ ಉದ್ದೇಶಗಳನ್ನು ಪೂರೈಸಲು ಮಣ್ಣು ಮತ್ತು ಕಲ್ಲು ಸಿಮೆಂಟ್ ಗಾರೆಯಿಂದ ಹಳ್ಳಕ್ಕೆ ಅಡ್ಡಲಾಗಿ ಕಟ್ಟಲಾಗುತ್ತದೆ. ಹಳ್ಳದ ಅಗಲ ಹೆಚ್ಚು ಇದ್ದಾಗ ಅಥವ ಸಮೀಪದಲ್ಲಿ (U/S ನಲ್ಲಿ) ಕಡಿದಾದ (Steep) ಇಳಿಜಾರಿನ ಬೆಟ್ಟದ ಸಾಲುಗಳಿದ್ದಲ್ಲಿ ಮಳೆಯ ನೀರನ್ನು ಸಂಗ್ರಹಿಸಿಬೇಕಾಗಿದ್ದು, ಹೆಚ್ಚಿನ ನೀರನ್ನು ಪುನಃ ಹಳ್ಳಕ್ಕೆ ಬಿಡಬೇಕಾದ ಸಂದರ್ಭಗಳು ಬರುತ್ತವೆ. ನಾಲಾ ಬದು ನಿರ್ಮಾಣ ಮಾಡಿದಾಗ ಕೋಡಿಯನ್ನು ನಿರ್ಮಿಸಬೇಕಾಗುತ್ತದೆ. ಹಳ್ಳದ ದಡದ ಭಾಗದಲ್ಲಿ ಸಾಗುವಳಿ ಜಮೀನುಗಳು ಇರುವಾಗ ತೋಡು ಹೊರಗಂಡಿಯನ್ನು ತೆಗೆಯಲು ಅವಕಾಶವಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಬಳಸಿಕೊಳ್ಳದ (ಪರ್ಕೊಲೇಶನ್ ಟ್ಯಾಂಕ್‍) ಅವಶ್ಯಕತೆ ಇರುತ್ತದೆ.

 

ಕಿಂಡಿ ಅಣೆ / ದ್ವಾರವುಳ್ಳ ಅಣೆ

 

     ಹಳ್ಳದ ತಳದಮಟ್ಟಕ್ಕೆ ಸಮಾನಾಂತರದಲ್ಲಿ ಇರುವ ತಡೆ ಅಣೆ (ವೆಂಟೆಡ್ ಡ್ಯಾಮ್) ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಿಯುವ ನೀರಿಗೆ ಹಳ್ಳದಲ್ಲಿ ದ್ವಾರವನ್ನು ತೆರೆದಿಟ್ಟು ನಂತರ ಹಳ್ಳದಲ್ಲಿ ಹರಿಯುವ (ಜೌಗು ನೀರನ್ನು) ನೀರನ್ನು ಶೇಖರಿಸಲು ದ್ವಾರಗಳನ್ನು ಮುಚ್ಚಲಾಗುವುದು. ಸೈಜುಕಲ್ಲು ಮತ್ತು ಸಿಮೆಂಟ್ ಗಾರೆಯಿಂದ / ಆರ್.ಸಿ.ಸಿ ಬಳಸಿ ನಿರ್ಮಿಸಿದ ಕಂಬಗಳ ನಡುವೆ ಮಂದ ಹಲಗೆಗಳನ್ನು ಜೋಡಿಸಿ ನೀರನ್ನು ಅಣೆಯ ಹಿಂಬಾಗದಲ್ಲಿ ಶೇಖರಿಸಲಾಗುವುದು. ನೆರೆ ಸಮಸ್ಯೆಯಿಲ್ಲದಿರುವೆಡೆ ಬಸಿ ನೀರನ್ನು ಸಂಗ್ರಹಿಸಲು ಕಿಂಡಿ ತಡೆ ಅಣೆಗಳನ್ನು ತೆಗೆದುಕೊಳ್ಳುವುದು. 1 ಮೀ. ಎತ್ತರ ನೀರು ಸಂಗ್ರಹಣೆಯನ್ನು ತಡೆ ಅಣೆ ಮಾದರಿಯಲ್ಲಿ ಮಾಡಿ, ಅದರ ಮೇಲೆ 0.6 ಮೀ. ಅಗಲ ಮತ್ತು 0.45 ಮೀ. ಎತ್ತರದ ಕಿಂಡಿಗಳನ್ನು ನಿರ್ಮಿಸಬಹುದು.

 

 ಕಲ್ಲು ಸಿಮೆಂಟ್ ಗಾರೆಯಿಂದ ನಾಲಾ ರಿವ್ಹಿಟ್ ಮೆಂಟ್

 

ಗುಡ್ಡಕಾಡು ಪ್ರದೇಶದಲ್ಲಿ ಮತ್ತು ಬೆಟ್ಟದ ಬುಡದಲ್ಲಿನ ಹಳ್ಳಗಳಲ್ಲಿ ತೀವ್ರ/ ತೀಕ್ಷ್ಣ ತಿರುವುಗಳಿದ್ದಾಗ ದಂಡೆಗಳ ಸ್ಥಿರೀಕರಣವನ್ನು ಕಲ್ಲುಸಿಮೆಂಟ್ ಗಾರೆಯಿಂದ ಕೈಗೊಳ್ಳಬೇಕು.

 

 

V. ಗುಣ ನಿಯಂತ್ರಣ

 

ಜಲಾನಯನ ಅಭಿವೃದ್ಧಿ ಕಾಮಗಾರಿಗಳ ನಿರ್ಮಾಣ ಸಂದರ್ಭಗಳಲ್ಲಿ ಉಪಯೋಗಿಸುವ ಸಾಮಗ್ರಿಗಳ ಗುಣಮಟ್ಟ, ವಿಧಾನ, ತಾಂತ್ರಿಕತೆಯ ಬಗ್ಗೆ ಉತ್ತಮ ಫಲಿತಾಂಶ ಪಡೆಯಬೇಕಾದಲ್ಲಿ ಗುಣಮಟ್ಟದ ಸಾಮಗ್ರಿ, ಉಪಕರಣಗಳ ಬಳಕೆಯಿಂದ ಪಡೆಯಬಹುದಾಗಿದೆ.

ಜಲಾನಯನ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವ ವಿಧಾನಗಳು

  • ಕಾಮಗಾರಿ ನಿರ್ಮಾಣ ಸಂದರ್ಭದಲ್ಲಿ ಉಪಯೋಗಿಸುವ ಸಾಮಗ್ರಿಗಳ ಗುಣಗಳ ಬಗ್ಗೆ ಅಧ್ಯಯನ ಮಾಡುವುದು.
  • ನಿರ್ಮಾಣ ಸಾಮಗ್ರಿಗಳ ಜೊತೆಗೆ ಇತರೆ ಕಲ್ಮಶಗಳು ಇರದಂತೆ ಎಚ್ಚರವಹಿಸುವುದು.
  • ಕಾಮಗಾರಿ ಪ್ರಾರಂಭಕ್ಕೆ ಮುನ್ನ ಅಂದಾಜು ವೆಚ್ಚ ತಯಾರಿಸುವಾಗ ಸಾಮಗ್ರಿಗಳ ಸೂಕ್ತ ಪ್ರಮಾಣವನ್ನು ಹಾಗೂ ಉತ್ತಮ ಗುಣಮಟ್ಟದ ಸಾಮಗ್ರಿಗಳು ಲಭ್ಯವಿರುವ ಸ್ಥಳವನ್ನು ಗುರುತಿಸಿಕೊಳ್ಳಬೇಕು.
  • ನಿರ್ಮಾಣ ಸಾಮಗ್ರಿಗಳು ಕಾರ್ಯಸ್ಥಳಕ್ಕೆ ಸಾಗಿಸಲು ಇರುವ ಸಾರಿಗೆ ವ್ಯವಸ್ಥೆ ಮತ್ತು ದೂರದ ಬಗ್ಗೆ ಗಮನ ಹರಿಸುವುದು.
  • ಕಾಮಗಾರಿಗಳ ನಿರ್ಮಾಣ ಕೆಲಸಕ್ಕೆ ನಿಪುಣ ಕೆಲಸಗಾರರನ್ನು ನೇಮಿಸುವುದು.
  • ಕಾಮಗಾರಿಗಳ ನಿರ್ಮಾಣ ಸಂದರ್ಭದಲ್ಲಿ ಅಂದಾಜು ವೆಚ್ಚದ ನಿರ್ಧಾರಿತ ಸಾಮಗ್ರಿಗಳ ಅನುಪಾತವನ್ನು ನಿರ್ವಹಣೆ ಮಾಡುವುದು.
  • ಕಾಮಗಾರಿಯ ನಿರ್ಮಾಣ ನಿರ್ಧಾರಿತ ಸ್ಥಳದಲ್ಲಿ ಸಾಮಗ್ರಿಗಳನ್ನು ದಾಸ್ತಾನು ಮಾಡುವಾಗ ಹತ್ತಿರವಾದ ಸೂಕ್ತ ಸ್ಥಳವನ್ನು ಗುರುತಿಸಿ ಜಾಗವನ್ನು ಸ್ವಚ್ಛಗೊಳಿಸುವುದು.

ಕಾಮಗಾರಿಗಳು ಪೂರ್ಣಗೊಂಡ ನಂತರ ಉಳಿಕೆ ಸಾಮಗ್ರಿಗಳನ್ನು ಸೂಕ್ತ ಸ್ಥಳಕ್ಕೆ ರವಾನಿಸುವುದು.

 

 

ಇತ್ತೀಚಿನ ನವೀಕರಣ​ : 28-11-2019 06:46 PM ಅನುಮೋದಕರು: Savitha Y S


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080